ಈಶ್ವರಪ್ಪ ತಲೆದಂಡಕ್ಕೆ ಪಕ್ಷದೊಳಗೇ ಹೆಚ್ಚಿದ ಒತ್ತಡ

Prasthutha|

ಬೆಂಗಳೂರು: ನಲವತ್ತು ಪರ್ಸೆಂಟ್ ಕಮೀಷನ್ ದಾಳಕ್ಕೆ ನೊಂದು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಬೆಳವಣಿಗೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಾತ್ರವಲ್ಲದೆ ಬಿಜೆಪಿಯ ದೊಡ್ಡ ಬಣ ಸಚಿವ ಈಶ್ವರಪ್ಪ ತಲೆದಂಡ ಬಯಸಿರುವ ಅಂಶ ಬೆಳಕಿಗೆ ಬಂದಿದೆ.

- Advertisement -

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೂ ತನಗೂ ಸಂಬಂಧವಿಲ್ಲ ಎಂದು ಸಚಿವ ಈಶ್ವರಪ್ಪ ಹೇಳಿದರೂ ಅವರ ತಲೆದಂಡಕ್ಕೆ ಸ್ವಪಕ್ಷದಲ್ಲಿ ಒತ್ತಡ ಹೆಚ್ಚಾಗುತ್ತಲೇ ಇದೆ.

ಬರುವ ಭಾನುವಾರ ಮತ್ತು  ಸೋಮವಾರ ಹೊಸಪೇಟೆಯಲ್ಲಿ ಪಕ್ಷದ ಕಾರ್ಯಕಾರಿಣಿ ಸಭೆ ನಡೆಯಲಿದ್ದು ಅಷ್ಟರೊಳಗಾಗಿ ಈಶ್ವರಪ್ಪ ಅವರನ್ನು ಹಣ್ಣುಗಾಯಿ-ನೀರುಗಾಯಿ  ಮಾಡಲು ರಾಜ್ಯ ಬಿಜೆಪಿಯ ಬಹುದೊಡ್ಡ ಬಣ ಬಯಸಿದೆ.

- Advertisement -

ಈಶ್ವರಪ್ಪ ತಮ್ಮ ಸಾವಿಗೆ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಇದೇ ಕಾರಣಕ್ಕಾಗಿ ಹಲವು ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.

ಈ ಮಧ್ಯೆ ಈಶ್ವರಪ್ಪ ವಿರುದ್ಧದ ಕಮೀಷನ್ ದಂಧೆಯ ಆರೋಪ ಇದ್ದಕ್ಕಿದ್ದಂತೆ ಸ್ಫೋಟಕ ತಿರುವು ಪಡೆದಿದ್ದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ವಿರುದ್ಧವೂ ದೊಡ್ಡ ಮಟ್ಟದ ಆರೋಪ ಕೇಳಿ ಬಂದಿದೆ.

ಇದರಿಂದಾಗಿ ಈಶ್ವರಪ್ಪ ಪ್ರಕರಣಕ್ಕೆ ಅಂಟಿಕೊಂಡು ಕಾರಜೋಳ ಮತ್ತು ಸುಧಾಕರ್ ಮೇಲೆ ಬರುವಂತಾಗಿದೆ.

ಈ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವ ಸಂಪುಟದ ಹಲವರು ಈಶ್ವರಪ್ಪ ಅವರ ಬೆನ್ನಿಗೆ ನಿಂತಿದ್ದು, ಒಂದು ವೇಳೆ ಈಶ್ವರಪ್ಪ ತಲೆದಂಡವಾದರೆ ಇನ್ನಷ್ಟು ಮಂದಿಯ ಮೇಲೆ ಕಾಂಗ್ರೆಸ್ ಮುಗಿಬೀಳಬಹುದು ಎಂಬ ಆತಂಕ ಇವರೆಲ್ಲರನ್ನು ಕಾಡುತ್ತಿರುವಂತಿದೆ.

ಕುತೂಹಲದ ಸಂಗತಿ ಎಂದರೆ ಈ ಹಿಂದೆ ಕೇಸರಿ ಧ್ವಜ ವಿವಾದದ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರ ವಿರುದ್ಧ ಮುಗಿಬಿದ್ದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ಬಾರಿಯೂ ಈಶ್ವರಪ್ಪ ಅವರ ವಿರುದ್ಧ ತಮ್ಮೆಲ್ಲ ಶಕ್ತಿ ಬಳಸಿ ಹೋರಾಟಕ್ಕಿಳಿದಿದ್ದಾರೆ.

ಈ ಮಧ್ಯೆ ಅವರಿಗೆ ಆಪ್ತರಾಗಿರುವ ಶಾಸಕರೊಬ್ಬರ ಬಗ್ಗೆಯೂ ಈಶ್ವರಪ್ಪನವರ ಆಪ್ತ ವಲಯ ಅನುಮಾನ ವ್ಯಕ್ತಪಡಿಸತೊಡಗಿದೆ.

ಸಂತೋಷ್ ಪಾಟೀಲ್ ಯಾವ ಕ್ಷೇತ್ರದಲ್ಲಿ ಗುತ್ತಿಗೆ ಕೆಲಸ ಮಾಡುತ್ತಿದ್ದರೋ?ಅದು ಸದರಿ ಕ್ಷೇತ್ರದ ಶಾಸಕರಿಗೆ ಗೊತ್ತಿರಬೇಕು. ಅದೇ ರೀತಿ ಸಂತೋಷ್ ಪಾಟೀಲ್ ಗುತ್ತಿಗೆ ಹಿಡಿದಿದ್ದರೆ ಆ ಶಾಸಕರಿಗೆ ಮಾಹಿತಿ ಇರಲೇಬೇಕು.

ಇಷ್ಟೆಲ್ಲ ಇದ್ದ ಮೇಲೆ ಸಂತೋಷ್ ಪಾಟೀಲರಿಗೆ ಸರ್ಕಾರದಿಂದ ಹಣ ಬರಬೇಕಿದ್ದರೆ ಶಾಸಕರು ಹೇಳಬಹುದಿತ್ತು.

ಎಲ್ಲಕ್ಕಿಂತ ಮುಖ್ಯವಾಗಿ ಸದರಿ ಶಾಸಕರ ಅನುಮತಿಯಿಲ್ಲದೆ ಸಂತೋಷ್ ಪಾಟೀಲ್ ಕೆಲಸ ವಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಅಂದ ಹಾಗೆ ಇದು ಗೊತ್ತಿರುವ ಶಾಸಕರು ಡಿಕೆಶಿ ಜತೆ ಸೇರಿ ಈಶ್ವರಪ್ಪ ಅವರ ವಿರುದ್ಧ ಪಿತೂರಿ ಮಾಡಿದರು ಎಂಬುದು ಈಶ್ವರಪ್ಪ ಆಪ್ತರ ವಾದ.

ಅದೇನೇ ಇದ್ದರೂ ಈಶ್ವರಪ್ಪ ಅವರನ್ನು ಮಂತ್ರಿ ಮಂಡಲದಿಂದ ಕಿತ್ತು ಹಾಕಿಸಲು ರಾಜ್ಯ ಬಿಜೆಪಿಯ ದೊಡ್ಡ ಪಡೆಯೊಂದು ಅವಿರತವಾಗಿ ಶ್ರಮಿಸುತ್ತಿದ್ದು, ಇದೇ ಪಡೆ ತೆರೆಯ ಹಿಂದೆ ಡಿಕೆಶಿ ಜತೆ ಕೈ ಜೋಡಿಸಿದೆ ಎಂಬುದೂ  ಇದೇ ಆಪ್ತರ ವಾದ.

ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರನ್ನು ಹಣಿಯಲು ಯಾವೆಲ್ಲ ಶಕ್ತಿಗಳು ಪರಸ್ಪರ ಕೈಗೂಡಿಸಿದ್ದವೋ? ಈಗಲೂ ಆ ಶಕ್ತಿಗಳು ಪರಸ್ಪರ ಕೈಗೂಡಿಸಿವೆ ಎಂಬುದು ಈಶ್ವರಪ್ಪ ಆಪ್ತರ ಅನುಮಾನ.

ಅದೇನೇ ಇದ್ದರೂ ಸಚಿವ ಈಶ್ವರಪ್ಪ ಅವರ ರಾಜೀನಾಮೆಗೆ ಕಾಂಗ್ರೆಸ್ ಬಹಿರಂಗವಾಗಿ ಒತ್ತಾಯಿಸಿದ್ದರೆ, ಬಿಜೆಪಿಯ ಒಂದು ಬಣ ಒಳಗಿಂದೊಳಗೇ ಪ್ರಯತ್ನ ನಡೆಸಿದ್ದು ಈ ಬೆಳವಣಿಗೆ ಮುಂದೇನು?ಎಂಬ ಕುತೂಹಲಕ್ಕೆ ಕಾರಣವಾಗಿದೆ

Join Whatsapp