ಮಂಗಳೂರು | ಕೊರೊನಾ ಸಂಕಷ್ಟದ ನಡುವೆ ಕಬ್ಬು ಬೆಳೆಗಾರರಲ್ಲಿ ಸಂತಸದ ನಗೆ

Prasthutha|

► ಗಣೇಶನ ಹಬ್ಬ, ತೆನೆ ಹಬ್ಬಕ್ಕೆ ಕಬ್ಬುಗಳ ಭರ್ಜರಿ ಮಾರಾಟ

ಮಂಗಳೂರು: ಕೊರೊನಾ ಸಂಕಷ್ಟದ ನಡುವೆಯೇ ಈ ಬಾರಿಯೂ ಗಣೇಶನ ಹಬ್ಬ, ತೆನೆ ಹಬ್ಬ ಬಂದಿದೆ‌. ಈ ಎರಡೂ ಹಬ್ಬಕ್ಕೂ ಅಗತ್ಯವಿರುವ ಕಬ್ಬು ಉತ್ತಮ ಬೆಲೆಯಲ್ಲಿ ಖರೀದಿಯಾಗುತ್ತಿದೆ. ಇದರಿಂದ ಕಬ್ಬು ಬೆಳೆಗಾರರು ಸಂತಸದ ನಗೆ ಬೀರಿದ್ದಾರೆ.

- Advertisement -

ಕಳೆದ ಬಾರಿಯೂ ಕೊರೊನಾ ಸೋಂಕಿನ ಮಧ್ಯೆಯೇ ಎರಡೂ ಹಬ್ಬಗಳು ಬಂದಿತ್ತು. ಪರಿಣಾಮ ಕಬ್ಬು ಸರಿಯಾದ ಬೆಲೆಗೆ ಬಿಕರಿಯಾಗದೆ ಬೆಳೆಗಾರರು ನಷ್ಟ ಅನುಭವಿಸಿದ್ದರು. ಕೆಲ ಬೆಳೆಗಾರರು ಕನಿಷ್ಠ ಬೆಳೆಗೆ ಕಬ್ಬನ್ನೂ ಮಾರಿದ್ದೂ ಇದೆ. ಮಂಗಳೂರಿನ ಹೊರವಲಯದ ಕಿನ್ನಿಗೋಳಿ ಸಮೀಪದ ಬಳ್ಕುಂಜೆ, ಉಳೆಪಾಡಿ, ಕರ್ನಿರೆ ಗ್ರಾಮದ ಜನತೆ ಸಾಕಷ್ಟು ಮಂದಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಅದರಲ್ಲೂ ಹೆಚ್ಚಿನವರು ಕಬ್ಬನ್ನೇ ಬೆಳೆಯುತ್ತಿದ್ದಾರೆ. ಸುಮಾರು 54 ಕುಟುಂಬವು ಕಬ್ಬು ಬೆಳೆಯನ್ನು ಆಶ್ರಯಿಸಿದ್ದು, ವರ್ಷಂಪ್ರತಿ ಸುಮಾರು 2 ರಿಂದ 2.50 ಲಕ್ಷದಷ್ಟು ಕಬ್ಬು ಬರೀ ಈ ಗ್ರಾಮದಲ್ಲಿಯೇ ಬೆಳೆಸಲಾಗುತ್ತಿದೆಯಂತೆ.

ಕಳೆದ ಬಾರಿ ಕಬ್ಬು ಬೆಳೆದ ಬೆಳೆಗಾರರು ಕೊರೊನಾ ಪರಿಣಾಮ ಸರಿಯಾದ ಬೆಲೆಯಿಲ್ಲದೆ ನಷ್ಟ ಅನುಭವಿಸಿದ್ದರು. ಆದರೆ ಈ ಬಾರಿ ಕಬ್ಬಿಗೆ ವಿಶೇಷ ಪ್ರಾಧಾನ್ಯತೆ ಇರುವ ಹಿಂದೂಗಳ ಗಣೇಶನ ಹಬ್ಬ ಹಾಗೂ ಕ್ರಿಶ್ಚಿಯನ್ನರ ತೆನೆಹಬ್ಬವು ಎರಡು ದಿನಗಳ ಅಂತರದಲ್ಲಿ ಬಂದಿದೆ‌. ಮತ್ತೆ ಈ ಬಾರಿಯೂ ತಾವು ಬೆಳೆದ ಬೆಳೆಯಿಂದ ನಷ್ಟ ಅನುಭವಿಸಬಾರದೆಂದು ಬೆಳೆಗಾರರು ಒಂದು ಕಬ್ಬಿಗೆ 25 ರೂ.ಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಬಾರದೆಂಬ ತೀರ್ಮಾನದಿಂದ ಕಬ್ಬು ಉತ್ತಮ ಬೆಲೆಗೆ ಮಾರಾಟವಾಗಿದೆ ಎಂದು ಕಬ್ಬು ಬೆಳೆಗಾರ ಮಹಿಳೆ ಅನಿತಾ ಸಂತಸ ವ್ಯಕ್ತಪಡಿಸುತ್ತಾರೆ. ಇದಕ್ಕೆ ಉಡುಪಿಯ ಶಾಸಕರು ಹಾಗೂ ಮೂಡುಬಿದಿರೆ ಶಾಸಕರ ಸಹಕಾರವೂ ಇತ್ತು ಎಂದು ನೆನಪಿಸುತ್ತಾರೆ.

ಇಲ್ಲಿನ ಕಬ್ಬು ನೆಲ್ಯಾಡಿ, ಉಪ್ಪಿನಂಗಡಿ ಹಾಗೂ ದೂರದ ಮೂಡಿಗೆರೆವರೆಗೂ ಮಾರಾಟವಾಗಿದೆಯಂತೆ. ಈಗಲೂ ಬೇಡಿಕೆ ಇದ್ದರೂ ಕಬ್ಬು ಪೂರ್ತಿ ಖಾಲಿಯಾಗಿದೆ. ಯಾವತ್ತೂ ಇಳುವರಿ ಇದ್ದರೂ ಬೇಡಿಕೆಯಿಲ್ಲದೆಯೋ, ದಳ್ಳಾಳಿಗಳ ತೊಂದರೆಗಳಿಂದ ಸರಿಯಾದ ಲಾಭ ಕೈಗೆ ಸಿಗುತ್ತಿರಲಿಲ್ಲ. ಆದರೆ ಈ ಬಾರಿ ಆ ರೀತಿ ಆಗಲಿಲ್ಲ, ಸರಿಯಾದ ಬೆಲೆಗೆ ಕಬ್ಬು ಮಾರಾಟವಾಗಿದೆ ಎಂದು ಅನಿತಾ ಹೇಳುತ್ತಾರೆ.

- Advertisement -