ಸ್ಮಾರ್ಟ್ ಸಿಟಿ ನೆಪದಲ್ಲಿ ಬೀದಿ ಬದಿ ವ್ಯಾಪಾರಿಗಳ ತೆರವು ಮುಂದುವರಿದರೆ ಪಾಲಿಕೆ ಕಚೇರಿಗೆ ಮುತ್ತಿಗೆ: ಎಸ್ ಡಿಟಿಯು ಎಚ್ಚರಿಕೆ

Prasthutha|

ಮಂಗಳೂರು: ದ.ಕ. ಜಿಲ್ಲೆಯ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರ ಮಾಡಿ ಜೀವನ ನಿರ್ವಹಿಸುತ್ತಿರುವ ಬೀದಿ ಬದಿ ವ್ಯಾಪಾರಿಗಳನ್ನು ಸ್ಮಾರ್ಟ್ ಸಿಟಿ ಅಭಿವೃದ್ಧಿ ಹಾಗೂ ವಿವಿಧ ಕಾರಣಗಳ ನೆಪವೊಡ್ಡಿ ಬಲವಂತದಿಂದ ತೆರವು ಗೊಳಿಸಲು ಮಂಗಳೂರು ಮಹಾನಗರ ಪಾಲಿಕೆ ಪ್ರಯತ್ನಿಸುತ್ತಿರುವುದು ಖಂಡನೀಯ. ಈ ಅಮಾನವೀಯ ಕೃತ್ಯವನ್ನು ನಿಲ್ಲಿಸದಿದ್ದರೆ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಸೋಷಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ರಾಜ್ಯ ಪ್ರಧಾನ ಕಾರ್ಯದರ್ಶಿ ಫಯಾಝ್ ದೊಡ್ಡಮನೆ ಎಚ್ಚರಿಸಿದ್ದಾರೆ.

- Advertisement -


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಬೀದಿ ಬದಿ ವ್ಯಾಪಾರಸ್ಥರ ಭದ್ರತೆಗಾಗಿ 2014 ಮತ್ತು 19 ರಲ್ಲಿ ರೂಪಿಸಿದ ನಿಯಾಮಾವಳಿಗಳ ಪ್ರಕಾರ ಮನಪಾ ಆಯುಕ್ತರು, ಸರಕಾರೇತರ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಮೀಸಲಾತಿ ಮುಖಾಂತರ ಆಯ್ಕೆಯಾದ ಸದಸ್ಯರನ್ನೊಳಗೊಂಡ ಬೀದಿ ಬದಿ ಪಟ್ಟಣ ವ್ಯಾಪಾರ ಸಮಿತಿಯನ್ನು ಅಸ್ತಿತ್ವಕ್ಕೆ ತಂದಿದೆ. ಈ ಸಮಿತಿಯೂ ಬೀದಿ ಬದಿ ವ್ಯಾಪಾರಸ್ಥರ ಕುಂದು ಕೊರತೆಗಳನ್ನು ಪರಿಹರಿಸಲು ಅವರ ಕ್ಷೇಮ ಮತ್ತು ಭದ್ರತೆಯ ದೃಷ್ಟಿಯನ್ನಿಟ್ಟು ಕಾರ್ಯನಿರ್ವಹಿಸುವುದಕ್ಕಾಗಿ ಅಸ್ತಿತ್ವಕ್ಕೆ ತರಲಾಗಿದೆ. ಆದರೆ ಈ ಅಧಿಕೃತ ಸಮಿತಿಯ ನಿಯಮಾವಳಿಯ ಅಧ್ಯಾಯ 2 ಉಲ್ಲೇಖಿತ ಸೆಕ್ಷನ್ (3) ರ ಪ್ರಕಾರ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆಗೊಳಿಸದೆ ತೆರವುಗೊಳಿಸುವಂತಿಲ್ಲ ಎಂಬ ನಿಬಂಧನೆಯನ್ನು ಪಾಲಿಕೆ ಅಧಿಕಾರಿಗಳು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದು ಅವರು ಆರೋಪಿಸಿದರು.


ಕೋವಿಡ್ ನಿಂದಾಗಿ ಆರ್ಥಿಕ ಅನಾನುಕೂಲತೆಯನ್ನು ಎದುರಿಸಿ ಶ್ರಮ ಪಟ್ಟು ಚೇತರಿಕೆ ಕಂಡುಕೊಳ್ಳಲು ಪ್ರಯತ್ನಿಸುವ ಬೀದಿ ಬದಿ ವ್ಯಾಪಾರಿಗಳನ್ನು ಸ್ಮಾರ್ಟ್ ಸಿಟಿ ಅಭಿವೃದ್ಧಿ ಹಾಗೂ ವಿವಿಧ ಕಾರಣಗಳಿಗಾಗಿ ತೆರವುಗೊಳಿಸಲು ಅಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳಿಗೆ ದಿನಂಪ್ರತಿ ಕಿರುಕುಳ ನೀಡುತ್ತಿದ್ದಾರೆ. ಆದ್ದರಿಂದ ಜೀವನಾಶ್ರಯಕ್ಕಾಗಿ ಸ್ವಾಭಿಮಾನದಿಂದ ಬದುಕು ಸಾಗಿಸಲು ಪ್ರಯತ್ನಿಸುವ ಬೀದಿ ಬದಿ ವ್ಯಾಪಾರಿಗಳ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹೇಳಿದರು.

- Advertisement -


ಜೀವನಾಶ್ರಯಕ್ಕಾಗಿ ಸ್ವಾಲಂಬಿಯಾಗಿ ಬದುಕು ಕಟ್ಟಲು ಪ್ರಯತ್ನಿಸುವ ಬೀದಿ ಬದಿ ವ್ಯಾಪಾರಿಗಳಿಗೆ ಪಾಲಿಕೆ ಪರ್ಯಾಯ ಸೂಕ್ತ ವ್ಯವಸ್ಥೆ ಕಲ್ಪಿಸದೆ ತೆರವುಗೊಳಿಸಲು ಪ್ರಯತ್ನಿಸಬಾರದು, ಅಸಂಘಟಿತ ಕಾರ್ಮಿಕ ವರ್ಗಕ್ಕೆ ಸೇರಿದ ಬೀದಿಬದಿ ವ್ಯಾಪಾರಸ್ಥರಿಗೆ ಸಮರ್ಪಕ ಸ್ಥಳಾವಕಾಶ ನೀಡಿ ಸಹಕರಿಸಬೇಕು, ಅಧಿಕೃತವಾಗಿ ರಚನೆಯಾದ ಬೀದಿ ಬದಿ ವ್ಯಾಪಾರಸ್ಥರ ಸಮಿತಿಯೊಂದಿಗೆ ಸಭೆ ನಡೆಸಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು, ಅರ್ಜಿ ಸಲ್ಲಿಸಿ ಬಾಕಿ ಇರುವ ವ್ಯಾಪಾರಿಗಳಿಗೆ ಪಾಲಿಕೆ ಪರಿಶೀಲನೆ ನಡೆಸಿ ಗುರುತಿನ ಚೀಟಿ ನೀಡಬೇಕು ಮತ್ತು ಅರ್ಜಿ ಸಲ್ಲಿಸಲು ಬಾಕಿ ಇರುವ ವ್ಯಾಪಾರಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟು ಸರ್ವೆ ನಡೆಸಿ ಶೀಘ್ರ ಗುರುತಿನ ಚೀಟಿ ನೀಡಬೇಕು


ಬೀದಿ ಬದಿ ವ್ಯಪಾರಸ್ಥರ ಭದ್ರತೆಗಾಗಿ ಸಂಘಟಿತ ಪ್ರಮಾಣ ಪತ್ರದ ಮೂಲಕ ಕ್ಷೇಮ ನಿಧಿ ಸ್ಥಾಪಿಸಬೇಕು, ತೆರವು ಕಾರ್ಯಾಚರಣೆ ವೇಳೆ ಪಾಲಿಕೆ ವಶಪಡಿಸಿದ ವ್ಯಾಪಾರಿಗಳ ಸ್ವತ್ತುಗಳನ್ನು ವಾರೀಸುದಾರರಿಗೆ ಮರಳಿ ನೀಡಬೇಕು ಎಂದು ಫಯಾಝ್ ದೊಡ್ಡಮನೆ ಆಗ್ರಹಿಸಿದರು.


ಪತ್ರಿಕಾಗೋಷ್ಠಿಯಲ್ಲಿ SDTU ಶರೀಫ್ ಪಾಂಡೇಶ್ವರ್ , ಜಿಲ್ಲಾಧ್ಯಕ್ಷ ಖಾದರ್ ಫರಂಗಿಪೇಟೆ, ಪ್ರಧಾನ ಕಾರ್ಯದರ್ಶಿ ಮಾಲಿಕ್ ಕೊಲಕೆ, ಮಂಗಳೂರು ದಕ್ಷಿಣ ಅಧ್ಯಕ್ಷ ಇಕ್ಬಾಲ್ ಕಣ್ಣೂರು ಉಪಸ್ಥಿತರಿದ್ದರು.

Join Whatsapp