ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಗೌರವ ಧನ ಹೆಚ್ಚಳ ಮತ್ತು ಇತರ ಸೌಲಭ್ಯ ಒದಗಿಸುವ ಕುರಿತು 25 ವಿಧಾನ ಪರಿಷತ್ ಶಾಸಕರ ನಿಯೋಗವು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ ಎಸ್ ಈಶ್ವರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
ದೇಶದ ಅಭಿವೃದ್ಧಿಯಲ್ಲಿ ಹಳ್ಳಿಗಳ ಪಾತ್ರ ಬಹಳ ಪ್ರಮುಖವಾಗಿದ್ದು, ಗ್ರಾಮವನ್ನು ಪ್ರತಿನಿಧಿಸುವ ಪಂಚಾಯಿತಿ ಸದಸ್ಯರಿಗೆ ಯಾವುದೇ ರೀತಿಯ ಸಮರ್ಪಕ ಸೌಲಭ್ಯ ಇರುವುದಿಲ್ಲ. ಅವರ ವೇತನವೂ ಸಹ ಬಹಳ ಕಡಿಮೆ ಇದ್ದು, ಬೇರೆ ಯಾವುದೇ ಸೌಲಭ್ಯ ಇವರಿಗೆ ದೊರಕುವುದಿಲ್ಲ. ಈ ಹಿನ್ನೆಲೆಯಲ್ಲಿ ಇವರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಕೋರಿದೆ.
ಪ್ರಜಾಪ್ರಭುತ್ವದಲ್ಲಿ ಸ್ಥಳೀಯ ಆಡಳಿತ ತನ್ನದೇ ಆದ ಮಹತ್ವ ಪಡೆದಿರುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಆಡಳಿತದ ಚುನಾವಣೆಗೆ ಅದರಲ್ಲೂ ಮುಖ್ಯವಾಗಿ ಮಹಿಳೆಯರು ಮತ್ತು ಮೀಸಲಾತಿ ಕ್ಷೇತ್ರಗಳಿಂದ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ಮುಖ್ಯ ಕಾರಣವೆನೆಂದರೆ ಚುನಾಯಿತರಾದ ಪ್ರತಿನಿಧಿಗಳಿಗೆ ಯಾವುದೇ ರೀತಿಯ ಸವಲತ್ತುಗಳಾಗಲಿ ಅಥವಾ ನಿರೀಕ್ಷೆ ಮಟ್ಟದಲ್ಲಿರುವ ಗೌರವ ಧನ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಗ್ರಾಮ ಪಂಚಾಯತಿ ಸದಸ್ಯರ ಗೌರವ ಧನ ಕಳೆದ 5 ವರ್ಷಗಳಿಂದ ಹೆಚ್ಚಳವಾಗಿಲ್ಲ. ಈಗ ಅವರಿಗೆ ಸಿಗುವ ಗೌರವ ಧನ ಕೇವಲ 1000 ರೂಪಾಯಿ, ಎಲ್ಲಾ ಚುನಾಯಿತ ಪ್ರತಿನಿಧಿಗಳು ಶೇಕಡ 100 ರಷ್ಟು ಗ್ರಾಮೀಣ ಪ್ರದೇಶದವರಾಗಿದ್ದು ಅವರಿಗೆ ಯಾವುದೇ ಇತರ ಮೂಲ ಆದಾಯ ಇರುವುದಿಲ್ಲ. ಒಂದು ಬಾರಿ ಚುನಾಯಿತರಾಗಿ ಆಯ್ಕೆಯಾದ ನಂತರ ಸದಸ್ಯರು ತಮ್ಮ ಇತರ ಉದ್ಯೋಗ ಅಥವಾ ಕೆಲಸ ಕಾರ್ಯಗಳಿಂದ ವಂಚಿತರಾಗಿ ಅವರ ಆರ್ಥಿಕ ಪರಿಸ್ಥಿತಿ ಅತ್ಯಂತ ದುಸ್ತರವಾಗುತ್ತದೆ ಎಂದು ಹೇಳಿದರು.
ಗ್ರಾಮ ಪಂಚಾಯತ್ ಸದಸ್ಯರ ಗೌರವಧನ ತಿಂಗಳಿಗೆ ಕನಿಷ್ಠ 10 ಸಾವಿರ ರೂಪಾಯಿಗಳಿಗೆ ಹೆಚ್ಚಿಸಬೇಕು. ಇತರ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ಅವರವರ ಕೆಲಸ ಕಾರ್ಯಗಳಿಗೆ ಅನುಗುಣವಾಗಿ ಗೌರವಧನವನ್ನು ಹೆಚ್ಚಿಸಬೇಕು. ಚುನಾಯಿತ ಪ್ರತಿನಿಧಿಗಳಿಗೆ ಜಿಲ್ಲಾ ಮಟ್ಟದಲ್ಲಿ ಓಡಾಡಲು ಉಚಿತ ಬಸ್ ಪಾಸ್, ಆರೋಗ್ಯ ವಿಮೆ ಮತ್ತು ಉಚಿತ ವೈದ್ಯಕೀಯ ಸೌಲಭ್ಯವನ್ನು ಒದಗಿಸಬೇಕು ಎಂದು ನಿಯೋಗ ಕೋರಿದೆ.