ಸಮಾಜವಾದಿ ಪಕ್ಷ ಸೇರ್ಪಡೆಗೊಂಡ ಮಾಜಿ ಬಿಜೆಪಿ ಶಾಸಕರ ಆಸ್ತಿ ನೆಲಸಮಕ್ಕೆ ಮುಂದಾದ ಆದಿತ್ಯನಾಥ್ ಸರ್ಕಾರ

Prasthutha|

ಲಕ್ನೋ: ಸಮಾಜವಾದಿ ಪಕ್ಷ ಸೇರ್ಪಡೆಗೊಂಡ ಕನಿಷ್ಠ ನಾಲ್ವರು ಮಾಜಿ ಬಿಜೆಪಿ ಶಾಸಕರ ಆಸ್ತಿಗಳನ್ನು ಅಕ್ರಮ ಒತ್ತುವರಿ ಆರೋಪದಲ್ಲಿ ಧ್ವಂಸಗೊಳಿಸಲು ಆದಿತ್ಯನಾಥ್ ಸರ್ಕಾರ ಮುಂದಾಗಿದೆ.

- Advertisement -

ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆಗೂ ಮುನ್ನ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾದ ಬಿಜೆಪಿಯ ಮಾಜಿ ಶಾಸಕ ರೋಷನ್ ಲಾಲ್ ವರ್ಮಾ ಅವರ ಸೊಸೆಯ ವಾಣಿಜ್ಯ ಸಂಕೀರ್ಣವನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಅಧಿಕಾರಿಗಳು ಧ್ವಂಸಗೊಳಿಸಿದ್ದಾರೆ.

ಇದು ಸರ್ಕಾರದ ವ್ಯವಸ್ಥಿತ ಪಿತೂರಿ ಎಂದು ವರ್ಮಾ ಟೀಕಿಸಿದ್ದಾರೆ.

- Advertisement -

ಈ ಮಧ್ಯೆ ಆಯುಷ್ ನ ಮಾಜಿ ರಾಜ್ಯ ಖಾತೆ ಸಚಿವ, ಶಾಸಕ ಧರಂ ಸಿಂಗ್ ಸೈನಿ ಅವರ ಆಸ್ತಿಯನ್ನು ಧ್ವಂಸಗೈಯ್ಯಲು ಸರ್ಕಾರ ಯೋಜನೆ ರೂಪಿಸಿದ್ದು, ಈ ಸಂಬಂಧ ನೋಟಿಸ್ ಜಾರಿಗೊಳಿಸಲಾಗಿದೆ. ಪಶುವೈದ್ಯಕೀಯ ಆಸ್ಪತ್ರೆಯನ್ನು ನೆಲಸಮಗೊಳಿಸಿದ ನಂತರ ಕಾನೂನುಬಾಹಿರವಾಗಿ ನಿರ್ಮಿಸಲಾಗಿದೆ ಎಂದು ಹೇಳಲಾಗುವ ಮಾರುಕಟ್ಟೆಯ ಮಾಲಕರಿಗೆ ನೋಟಿಸ್ ನೀಡಲಾಗಿದೆ. ಇದರಲ್ಲಿ ಸೈನಿ ಅವರು ಎರಡು ಅಂಗಡಿಗಳನ್ನು ಹೊಂದಿದ್ದಾರೆ ಎಂದು ಪತ್ರಕರ್ತ ಪಿಯೂಷ್ ರೈ ಟ್ವೀಟ್ ಮಾಡಿದ್ದಾರೆ.

ಬಿಜೆಪಿಯ ಮಾಜಿ ಶಾಸಕ ಬ್ರಿಜೇಶ್ ಪ್ರಜಾಪತಿ ಅವರಿಗೆ ಕೂಡ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದ್ದು, ಬಂಡಾ ಜಿಲ್ಲೆಯಲ್ಲಿರುವ ಬಹುಮಹಡಿಯ ಕಟ್ಟಡವನ್ನು ಸೂಕ್ತ ಪರವಾನಿಗೆ ಇಲ್ಲದೆ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಟ್ಟಡಗಳನ್ನು ಕೆಡವಲು ಬಂಡಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಆದೇಶ ನೀಡಲಾಗಿದೆ.

ಈ ಮೂವರು ಮಾಜಿ ಬಿಜೆಪಿ ಶಾಸಕರು ಈ ವರ್ಷದ ಜನವರಿಯಲ್ಲಿ ಬಿಜೆಪಿಯ ಮಾಜಿ ಸಚಿವ ಮತ್ತು ಹಿರಿಯ ಒಬಿಸಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರೊಂದಿಗೆ ಎಸ್ ಪಿಗೆ ಸೇರ್ಪಡೆಗೊಂಡಿದ್ದರು.

ಮೌರ್ಯ ಅವರು 15 ದಿನಗಳಲ್ಲಿ ಅಕ್ರಮ ನಿರ್ಮಾಣದ ಕಟ್ಟಡವನ್ನು ಸ್ವಇಚ್ಛೆಯಿಂದ ತೆರವುಗೊಳಿಸದಿದ್ದರೆ ಬಿಡಿಎಯಿಂದ ಅದನ್ನು ನೆಲಸಮಗೊಳಿಸಲಾಗುವುದು ಮತ್ತು ವೆಚ್ಚವನ್ನು ಅವರೇ ಭರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಗುಜರಾತ್, ಮಧ್ಯಪ್ರದೇಶ ಮತ್ತು ದೆಹಲಿಯಲ್ಲಿ ಬಿಜೆಪಿ ಸರ್ಕಾರಗಳು ಮತ್ತು ಅಧಿಕಾರಿಗಳ “ಅತಿಕ್ರಮಣ-ವಿರೋಧಿ ಬೆಳವಣಿಗೆ”ಗಳನ್ನು ವಿರೋಧಿಸಿ ವಿಪಕ್ಷ ನಾಯಕರು, ಮಾನವ ಹಕ್ಕು ಸಂಘಟನೆ ಮತ್ತು ಭಾರತದ ಸುಪ್ರೀಂ ಕೋರ್ಟ್ ನಿಂದಲೂ ಟೀಕೆ ಎದುರಿಸಿದ ಬಳಿಕ ಇದು ನಡೆಯುತ್ತಿರುವುದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Join Whatsapp