ಮಂಗಳೂರು: ಮಂಗಳೂರು ನಗರದ ಸುರತ್ಕಲ್ ಗೊಡ್ಡೆಕೊಪ್ಲ ಕಡಲ ತೀರದಲ್ಲಿ ಬೆಳಗ್ಗೆ ಜೀವನ್ ಪಿರೇರಾ ಎಂಬ ಮೀನುಗಾರ ಹಾಕಿರುವ ಕೈರಂಪೊನಿ ಬಲೆಗೆ ಮೀನುಗಳ ರಾಶಿಯೇ ಬಿದ್ದಿದ್ದು, ಸಂಭ್ರಮ ಮುಗಿಲುಬಿಟ್ಟಿದೆ.
ದಡದಿಂದ ಬೀಸುವ ಕೈರಂಪೊನಿ ಬಲೆಗೆ ಸುಮಾರು 400 ಕೆಜಿಯಷ್ಟು ಮೀನು ಬಿದ್ದಿದ್ದು, ವಿವಿಧ ಬಗೆಯ ಮೀನುಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಬಂಗುಡೆ, ಕೊಡ್ಡಾಯಿ, ಕಲ್ಲೂರು ಅಲ್ಲದೆ, ಮಾಂಜಿ, ಎಟ್ಟಿ ಮೀನುಗಳು ಸಣ್ಣ ಪ್ರಮಾಣದಲ್ಲಿ ಬಲೆಗೆ ಬಿದ್ದಿದೆ. ಈ ರಾಶಿ ರಾಶಿ ಮೀನುಗಳನ್ನು ಕಂಡು ಜನರು ಖರೀದಿಗೆ ಮುಗಿಬಿದ್ದಿದ್ದಾರೆ.
ಇತ್ತೀಚೆಗೆ ಉಡುಪಿ ಕಡಲ ತೀರದಲ್ಲಿ ಮೀನುಗಾರರ ಬಲೆಗೆ ನೂರಾರು ತೊರಕೆ ಮೀನುಗಳು ಬಿದ್ದು ಜನರಿಗೆ ಆಶ್ಚರ್ಯವನ್ನು ಮೂಡಿಸಿತ್ತು. 50 ಕೆಜೆ ಯಷ್ಟು ಗಾತ್ರದ ನೂರಾರು ತೊರಕೆ ಮೀನುಗಳು ಬಿದ್ದಿದ್ದು, ತೊರಕೆ ಮೀನುಗಳನ್ನು ನೋಡಲು ಜನಸಾಗರವೇ ನೆರೆದಿತ್ತು. ದೊಡ್ಡ ಬಡಿಗೆಯಲ್ಲಿ ಮೀನನ್ನು ಕಟ್ಟಿ ಸಾಗಿದ ಮೀನುಗಾರರು ಒಂದು ಕೆ.ಜಿಗೆ 250 ರಿಂದ 300 ರೂಪಾಯಿಯಂತೆ ಮಾರಾಟ ಮಾಡಿದ್ದಾರೆ.
ಪಕ್ಷಿಗಳಂತೆ ಹಾರುವ ಅಪರೂಪದ ಮೀನುಗಳು ಕೂಡ ಮೀನುಗಾರರು ಹಾಕಿದ್ದ ಬಲೆಗೆ ಬಿದ್ದಿದ್ದವು. ಹಾಗೂ ಮಂಗಳೂರಿನ ಧಕ್ಕೆಯ ಮೀನಿನ ರಾಶಿಯಲ್ಲಿ ಎರಡು ಹಾರುವ ಮೀನು ದೊರೆತಿತ್ತು. ಈ ಮೀನಿಗೆ ತುಳುವಿನಲ್ಲಿ ಪಕ್ಕಿಮೀನು ಎಂದು ಕರೆಯುತ್ತಾರೆ.
ಇದೀಗ ಮಂಗಳೂರಿನಲ್ಲಿ ಒಂದೇ ಬಲೆಗೆ 400 ಕೆಜಿಯಷ್ಟು ಮೀನುಗಳು ಬಿದ್ದಿದ್ದು, ಮೀನುಗಾರನಿಗೆ ಬಂಪರ್ ಹೊಡೆದಂತಾಗಿದೆ.