ಪರಿಶಿಷ್ಟ ಜಾತಿಯ ಕುಟುಂಬವನ್ನು ಕೂಡಿ ಹಾಕಿ ಹಿಂಸೆ: ನಿಷ್ಪಕ್ಷಪಾತ ತನಿಖೆಗೆ ಸಿದ್ದರಾಮಯ್ಯ ಆಗ್ರಹ

Prasthutha|

ಬೆಂಗಳೂರು: ಚಿಕ್ಕಮಗಳೂರು ತಾಲ್ಲೂಕಿನ ಹುಣಸೆಹಳ್ಳಿಪುರದ ಎಸ್ಟೇಟ್ ನಲ್ಲಿ ಕೆಲಸಕ್ಕಿದ್ದ ಪರಿಶಿಷ್ಟ ಜಾತಿಯ ಒಂದೇ ಕುಟುಂಬದ 10 ಮಂದಿಯನ್ನು ಎಸ್ಟೇಟ್ ಮಾಲೀಕರು ಕೂಡಿ ಹಾಕಿ ಹಿಂಸಿಸಿರುವ ಘಟನೆ ಬಗ್ಗೆ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಿ ನೊಂದವರಿಗೆ ನ್ಯಾಯ ಒದಗಿಸಬೇಕೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

- Advertisement -

ಶಾಸಕ ಸಿ.ಟಿ.ರವಿ ಮತ್ತು ಬಿಜೆಪಿಯವರ ಬೇಷರತ್ ಬೆಂಬಲ ತಮಗೆ ಇದೆ ಎನ್ನುವ ದರ್ಪದಲ್ಲಿ ಎಸ್ಟೇಟ್ ಮಾಲೀಕರಿಂದ ಈ ದೌರ್ಜನ್ಯ ನಡೆಸಲಾಗಿದೆ ಎನ್ನುವ ಸಂಗತಿ ಆಘಾತಕಾರಿಯಾದದ್ದು ಎಂದು ಅವರು ತಿಳಿಸಿದ್ದಾರೆ.

ದಲಿತ ಕಾರ್ಮಿಕ ಕುಟುಂಬವನ್ನು ಶೌಚಾಲಯವೂ ಇಲ್ಲದ ಮನೆಯೊಳಗೆ ಇಡೀ ದಿನ ಕೂಡಿ ಹಾಕಲಾಗಿದೆ. ಮಕ್ಕಳು ಕೂಡ ಈ ದೌರ್ಜನ್ಯಕ್ಕೆ ತುತ್ತಾಗಿದ್ದಾರೆ. ಗರ್ಭಿಣಿಯ ಕಪಾಳಕ್ಕೂ ಹೊಡೆದು ಹಿಂಸಿಸಲಾಗಿದೆ ಎನ್ನುವ ವರದಿಗಳೂ ಇವೆ. ಸದ್ಯ ಬಾಳೆಹೊನ್ನೂರು ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಆದರೆ ಆರೋಪಿಗಳನ್ನು ಬಂಧಿಸುವುದಾಗಲೀ, ಸೂಕ್ತ ವಿಚಾರಣೆ ನಡೆಸುವುದಾಗಲೀ ಇದುವರೆಗೂ ಆಗಿಲ್ಲ. ಆರೋಪಿಗಳ ಬೆನ್ನಿಗೆ ಬಿಜೆಪಿ ಸರ್ಕಾರವೇ ನಿಂತಿರುವುದರಿಂದ ಆರೋಪಿಗಳು ಇನ್ನೂ ಸುರಕ್ಷಿತವಾಗಿ ಓಡಾಡುತ್ತಿದ್ದಾರೆ. ಸಂತ್ರಸ್ತರು ಜೀವ ಭಯದಲ್ಲಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

- Advertisement -

ದೌರ್ಜನ್ಯಕ್ಕೆ ಒಳಗಾದ ಗರ್ಭಿಣಿಯ ಗರ್ಭಪಾತವಾಗಿದೆ ಎನ್ನುವ ಸುದ್ದಿಗಳೂ ಹರಿದಾಡುತ್ತಿವೆ. ಇದರ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸಬೇಕು. ತಪ್ಪಿತಸ್ಥರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಂಡು ಭಯದಲ್ಲಿರುವ ಸಂತ್ರಸ್ತ ಕುಟುಂಬದ ಸದಸ್ಯರಿಗೆ ಸೂಕ್ತ ಭದ್ರತೆ ನೀಡಬೇಕು. ಎಸ್ಟೇಟ್ ಗಳಿಗೆ ಗುಳೆ ಬಂದು ಕೆಲಸ ಮಾಡುತ್ತಿರುವ ನೂರಾರು ಕುಟುಂಬಗಳಿಗೆ ಸರ್ಕಾರದ ಯಾವ ಸವಲತ್ತುಗಳೂ ತಲುಪುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಆಕರ್ಷಕ ಮಾತುಗಳಿಂದ ದಲಿತ ಕೂಲಿ ಕಾರ್ಮಿಕರನ್ನು ಮರಳು ಮಾಡುವ ಬಿಜೆಪಿಯವರು ಈಗ ಅವರ ಮೇಲೆ ಕ್ರೌರ್ಯ, ದೌರ್ಜನ್ಯ ನಡೆದಾಗಲೂ ಅವರ ರಕ್ಷಣೆಗೆ ನಿಲ್ಲುತ್ತಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಎಸ್ಟೇಟ್ ಕಾರ್ಮಿಕರ ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ತಂದೆ ತಾಯಿಯರು ಕೂಲಿ ಕೆಲಸಕ್ಕೆ ಹೋದಾಗ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಅವರ ಕಲಿಕೆಗೆ ಅಗತ್ಯ ಸವಲತ್ತುಗಳನ್ನು ಒದಗಿಸಬೇಕು. ಆ ಮಕ್ಕಳಿಗೆ ಅಗತ್ಯ ಪೌಷ್ಟಿಕ ಆಹಾರ ದೊರೆಯುವಂತೆ ನೋಡಿಕೊಳ್ಳಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಮೊಬೈಲ್ ಆರೋಗ್ಯ ಕೇಂದ್ರಗಳ ಮೂಲಕ ಎಸ್ಟೇಟ್ ಕಾರ್ಮಿಕರು ಮತ್ತು ಮಕ್ಕಳ ಆರೋಗ್ಯಕ್ಕೆ ಅಗತ್ಯ ನೆರವು ಒದಗಿಸಬೇಕು ಎಂದು ನಾನು ಈ ಹಿಂದೆಯೂ ನಾನಾ ಸಂದರ್ಭಗಳಲ್ಲಿ ಒತ್ತಾಯಿಸಿದ್ದೆ. ಆದರೆ, ಈ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ ಎಂದು ಅವರು ಗುಡುಗಿದ್ದಾರೆ.

ಕಾರ್ಮಿಕರು ಸಾಮೂಹಿಕವಾಗಿ ಸರ್ಕಾರದ ವಿರುದ್ಧ ತಿರುಗಿ ಬೀಳುವ ಮೊದಲು ಅವರ ಸಂಕಷ್ಟಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸಬೇಕು. ಮೇಲಿಂದ ಮೇಲೆ ನಡೆಯುವ ದೌರ್ಜನ್ಯಗಳಿಗೆ ತಡೆ ಬೀಳಬೇಕು. ದಲಿತ ಕಾರ್ಮಿಕ ಕುಟುಂಬದ ಮೇಲೆ ನಡೆದಿರುವ ದೌರ್ಜನ್ಯಕ್ಕೆ ನೆಪ ಮಾತ್ರದ ಕೇಸು ದಾಖಲಿಸಿ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಸರ್ಕಾರದ ನಾಟಕದ ವಿರುದ್ಧವೂ ಎಸ್ಟೇಟ್ ಕಾರ್ಮಿಕರು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪಕ್ಕದ ಕ್ಷೇತ್ರದವರೇ ಆಗಿದ್ದಾರೆ. ಆದರೆ ಇದುವರೆಗೂ ಸಂತ್ರಸ್ಥ ಕುಟುಂಬಗಳನ್ನು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬುವ, ಪರಿಹಾರ ದೊರಕಿಸಿಕೊಡುವ ಕಾರ್ಯ ಮಾಡಿಲ್ಲ. ಆದ್ದರಿಂದ ತಕ್ಷಣ ಗೃಹ ಸಚಿವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ  ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

Join Whatsapp