ಪಾಕಿಸ್ತಾನ ಸಂಸತ್ ವಿಸರ್ಜನೆ: ಇಮ್ರಾನ್ ಖಾನ್ ಸೇಫ್, ಕೋರ್ಟ್ ಮೊರೆಹೋದ ವಿಪಕ್ಷಗಳು

Prasthutha|

ಇಸ್ಲಾಮಾಬಾದ್‌: ಅನಿಶ್ಚಿತತೆಯಲ್ಲಿದ್ದ ಪಾಕಿಸ್ತಾನದ ರಾಜಕೀಯದಲ್ಲಿ ಇಂದು ಅಚ್ಚರಿಯ ಬೆಳವಣಿಗೆಗಳು ನಡೆದಿವೆ. ಅವಿಶ್ವಾಸದಿಂದ ಪಾರಾಗಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೊಸದಾಗಿ ಚುನಾವಣೆ ಎದುರಿಸಲು ರೆಡಿ ಆಗಿದ್ದಾರೆ. ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯನ್ನು ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯಲ್ಲಿ ಇಂದು ಉಪ ಸಭಾಪತಿ ತಿರಸ್ಕರಿಸಿದ್ದು, ಅವಿಶ್ವಾಸ ಗೊತ್ತುವಳಿಯು ಅಸಾಂವಿಧಾನಿಕ, ಇದು ವಿದೇಶಿ ಶಕ್ತಿಗಳ ಪಿತೂರಿ ಎಂದು ಅಭಿಪ್ರಾಯಪಟ್ಟು, ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಿದ್ದಾರೆ.

- Advertisement -


ತನ್ನ ವಿರುದ್ಧ ಅವಿಶ್ವಾಸ ನಿರ್ಣಯ ವಜಾಗೊಂಡ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಸಂಸತ್ ವಿಸರ್ಜಿಸುವಂತೆ ಅಧ್ಯಕ್ಷರಿಗೆ ಕೇಳಿದ್ದೇನೆ ಎಂದು ತಿಳಿಸಿದರು. ಹೊಸ ಚುನಾವಣೆಗೆ ಸಿದ್ಧವಾಗುವಂತೆ ಪಾಕ್ ಜನರಿಗೆ ಕರೆ ನೀಡಿದರು. ಪ್ರಜಾಸತ್ತಾತ್ಮಕ ರೀತಿಯಲ್ಲಿ ಚುನಾವಣೆಗಳು ನಡೆಯಬೇಕು ಎಂದು ಹೇಳಿದರು. ಪಾಕಿಸ್ತಾನದಲ್ಲಿ ಯಾರು ಆಡಳಿತ ನಡೆಸಬೇಕು ಎಂಬುದನ್ನು ಪಾಕಿಸ್ತಾನವೇ ನಿರ್ಧರಿಸಬೇಕು ಎಂದು ಇಮ್ರಾನ್‌ ಹೇಳಿದ್ದಾರೆ.

ಇಮ್ರಾನ್ ಖಾನ್ ದೇಶವನ್ನುದ್ದೇಶಿಸಿ ಮಾತನಾಡಿದ ಬೆನ್ನಲ್ಲೇ ಪಾಕಿಸ್ತಾನದ ಸಂಸತ್ ವಿಸರ್ಜನೆ ಆಗಿದೆ. ಪ್ರಧಾನಿ ಇಮ್ರಾನ್ ಖಾನ್ ಅವರ ಸಲಹೆಯ ಮೇರೆಗೆ ಪಾಕಿಸ್ತಾನ ಅಧ್ಯಕ್ಷ ಆರಿಫ್ ಅಲ್ವಿ ಅವರು ಸಂಸತ್ ವಿಸರ್ಜಿಸಿದ್ದಾರೆ. 90 ದಿನಗಳ ಒಳಗೆ ಚುನಾವಣೆ ನಡೆಸಲು ಸೂಚನೆ ನೀಡಿದ್ದಾರೆ. 90 ದಿನಗಳಲ್ಲಿ ಹೊಸ ಚುನಾವಣೆ ನಡೆಯಲಿದೆ ಎಂದು ಪಾಕಿಸ್ತಾನದ ಸರ್ಕಾರ ತಿಳಿಸಿದೆ. ಸದ್ಯ ಸಂವಿಧಾನದ 224 ನೇ ವಿಧಿಯ ಅಡಿಯಲ್ಲಿ ಪ್ರಧಾನಿ ತಮ್ಮ ಕರ್ತವ್ಯಗಳನ್ನು ಮುಂದುವರಿಸುತ್ತಾರೆ. ಕ್ಯಾಬಿನೆಟ್ ಅನ್ನು ವಿಸರ್ಜಿಸಲಾಗಿದೆ.

- Advertisement -


ಇಮ್ರಾನ್‌ ಖಾನ್ ವಿರುದ್ಧದ ಅವಿಶ್ವಾಸ ಗೊತ್ತುವಳಿ ವಜಾ ಮಾಡಿದ್ದಕ್ಕೆ ವಿರೋಧ ಪಕ್ಷದ ನಾಯಕರು ಸಂಸತ್ತಿನ ಪ್ರತಿಭಟನೆ ನಡೆಸಿವೆ. ಸಂಸತ್ ವಿಸರ್ಜನೆ ಮಾಡಿದ್ದಕ್ಕೆ ಸಂಸತ್ ನಿಂದ ಹೊರಬರದೇ ಪ್ರತಿಭಟನೆ ನಡೆಸಿದರು. ಇನ್ನೊಂದೆಡೆ ಸಂಸತ್ ವಿಸರ್ಜನೆ ಪ್ರಶ್ನಿಸಿ ವಿರೋಧ ಪಕ್ಷಗಳು ಸುಪ್ರೀಂಕೋರ್ಟ್ ಮೊರೆಹೋಗಿವೆ. ಪಾಕ್ ಸಂಸತ್ ನ ವಿರೋಧ ಪಕ್ಷಗಳ ಅರ್ಜಿಯನ್ನು ಸ್ವೀಕರಿಸಿರುವ ಸುಪ್ರೀಂಕೋರ್ಟ್, ಈ ವಿಚಾರಣೆಗೆ ವಿಶೇಷ ಪೀಠವನ್ನು ರಚನೆ ಮಾಡಿದೆ.

Join Whatsapp