ಮಂಗಳೂರು: ಎಂಸಿಸಿ ಬ್ಯಾಂಕ್ ವಿರುದ್ಧದ ಆರೋಪ ನಿರಾಧಾರ – ಅನಿಲ್ ಲೋಬೋ ಸ್ಪಷ್ಟನೆ

Prasthutha|

ಜೆರಾರ್ಡ್ ಟವರ್ಸ್ ಓರ್ವ ಸೋಕಾಲ್ಡ್ ಸಾಮಾಜಿಕ ಕಾರ್ಯಕರ್ತ

- Advertisement -

ಮಂಗಳೂರು: ಬ್ಯಾಂಕಿನ ವ್ಯವಹಾರಗಳೆಲ್ಲವೂ ಪಾರದರ್ಶಕವಾಗಿದ್ದು, ಸಾಮಾಜಿಕ ಕಾರ್ಯಕರ್ತ ಎಂಬ ವೇಷ ತೊಟ್ಟ ಜೆರಾರ್ಡ್ ಟವರ್ಸ್ ಮಾಡುತ್ತಿರುವ ಆರೋಪ ನಿರಾಧಾರವಾಗಿದ್ದು ಕಾನೂನು ಹೋರಾಟದ ಬಗ್ಗೆ ಆಡಳಿತ ಮಂಡಳಿ ಸಭೆ ನಡೆಸಿ ನಿರ್ಧರಿಸುವುದಾಗಿ ಮಂಗಳೂರು ಕ್ಯಾಥೋಲಿಕ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಅಧ್ಯಕ್ಷ ಅನಿಲ್ ಲೋಬೋ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ‘ಪ್ರಸ್ತುತ ನ್ಯೂಸ್’ ಜೊತೆ ಮಾತನಾಡಿದ ಅವರು, ಇತ್ತೀಚೆಗೆ ಸಾಮಾಜಿಕ ಕಾರ್ಯಕರ್ತ ಹಾಗೂ ಎಂಸಿಸಿ ಬ್ಯಾಂಕಿನ ಸದಸ್ಯರೂ ಆದ ಜೆರಾರ್ಡ್ ಟವರ್ಸ್ ನಡೆಸಿರುವ ಆರೋಪಗಳು ಆಧಾರ ರಹಿತವಾಗಿದೆ. ಸಾಲ ನೀಡುವಿಕೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ವಿಧಿಸಿರುವ ನಿಬಂಧನೆಗಳನ್ನು ಎಂಸಿಸಿ ಬ್ಯಾಂಕ್ ಯಥಾ ಪ್ರಕಾರ ಪಾಲಿಸಿಕೊಂಡು ಬಂದಿದೆ. ಜೆರಾರ್ಡ್ ಟವರ್ಸ್ ಎರಡು ವರುಷಗಳ ಹಿಂದೆಯೇ ಆರ್.ಬಿ.ಐ., ಪ್ರಧಾನಿ, ವಿತ್ತ ಸಚಿವೆ, ರಾಜ್ಯದ ಮುಖ್ಯಮಂತ್ರಿ ಹಾಗೂ ಸಂಸದ, ಸ್ಥಳೀಯ ಶಾಸಕರೆಲ್ಲರಿಗೂ ದೂರು ನೀಡಿದ್ದಾರೆ. ಆದರೆ ಅವರು ನೀಡಿದ ದೂರು ಆಧಾರ ರಹಿತ ಅನ್ನೋದು ಮನದಟ್ಟಾಗಿದೆ. ಹಾಗಾಗಿ ಜಾಲತಾಣ ಹಾಗೂ ಮಾಧ್ಯಮಗಳ ಮೂಲಕ ಇದೀಗ ವೃಥಾ ಆರೋಪ ಹೊರಿಸುತ್ತಿದ್ದಾರೆ ಎಂದರು.

- Advertisement -

ಕಳೆದ ವರುಷ ಇದೇ ಜೆರಾರ್ಡ್ ಟವರ್ಸ್ ವಿರುದ್ಧ ಬಂದರು ಠಾಣೆಯಲ್ಲಿ ದೂರು ದಾಖಲಿಸಿದ್ದು, ಅದರನ್ವಯ ಕ್ರಿಮಿನಲ್ ಪ್ರಕರಣ ದಾಖಲಾಗಿರುವ ಕುರಿತು ಮಾಹಿತಿ ನೀಡಿರುವ ಅನಿಲ್ ಲೋಬೋ, ಜೆರಾರ್ಡ್ ಟವರ್ಸ್ ಸಾಮಾಜಿಕ ಕಾರ್ಯಕರ್ತನ ವೇಷ ಧರಿಸಿ ಇಂತಹ ಕೆಲಸ ಮಾಡುವುದರ ಹಿಂದೆ ಕಾಣದ ಕೈಗಳ ಕೈವಾಡವಿದೆ ಅನ್ನೋ ಶಂಕೆಯಿದೆ. ಆದರೆ ಇದ್ಯಾವುದಕ್ಕೂ ಎಂಸಿಸಿ ಬ್ಯಾಂಕ್ ತಲೆಗೆಡಿಸಿಕೊಳ್ಳುವುದಿಲ್ಲ. ಗ್ರಾಹಕರಿಗೆ ಇನ್ನಷ್ಟು ಪಾರದರ್ಶಕ ಹಾಗೂ ಉತ್ತಮ ಸೇವೆ ನೀಡಲು ಸಿದ್ಧವಿರುವುದಾಗಿ ಅನಿಲ್ ಲೋಬೋ ಸ್ಪಷ್ಟಪಡಿಸಿದ್ದಾರೆ.

ಕಳೆದ ತಿಂಗಳು ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಜೆರಾರ್ಡ್ ಟವರ್ಸ್ ಇತರೆ ಇಬ್ಬರ ಜೊತೆ ಸೇರಿಕೊಂಡು ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಟಿ ನಡೆಸಿ, ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ ಹಾಗೂ ನಿರ್ದೇಶಕ ಜೋಸೆಫ್ ಅನಿಲ್ ಪತ್ರಾವೋ ಅವರು ಅವ್ಯವಹಾರದಲ್ಲಿ ತೊಡಗಿದ್ದು ತಕ್ಷಣವೇ ಅಧಿಕಾರದಿಂದ ಅನರ್ಹಗೊಳಿಸುವಂತೆ ಆಗ್ರಹಿಸಿದ್ದರು.  

Join Whatsapp