ಖ್ಯಾತ ವಿದ್ವಾಂಸ ಮೌಲಾನಾ ಕಲೀಂ ಸಿದ್ದೀಖಿ ಬಂಧನ ಖಂಡಿಸಿ ಇಮಾಮ್ಸ್ ಕೌನ್ಸಿಲ್ ನಿಂದ ದೇಶಾದ್ಯಂತ ಪ್ರತಿಭಟನೆ

Prasthutha|

► 2 ದಿನಗಳ ಕಾಲ “ದಬ್ಬಾಳಿಕೆಯ ವಿರುದ್ಧ ಧ್ವನಿ ಎತ್ತಿ” ಅಭಿಯಾನ

- Advertisement -


ಬೆಂಗಳೂರು:
ಮತಾಂತರದ ಸುಳ್ಳು ಆರೋಪದಲ್ಲಿ ಖ್ಯಾತ ಇಸ್ಲಾಮಿಕ್ ವಿದ್ವಾಂಸ ಮೌಲಾನಾ ಕಲೀಂ ಸಿದ್ದೀಖಿ ಅವರ ಬಂಧನದ ವಿರುದ್ಧ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದು, “ ದಬ್ಬಾಳಿಕೆಯ ವಿರುದ್ಧ ಧ್ವನಿ ಎತ್ತಿ” ಎಂಬ ಅಭಿಯಾನವನ್ನು ಆಯೋಜಿಸಿದೆ.


ಈ ಬಗ್ಗೆ ಮಾಹಿತಿ ನೀಡಿರುವ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಷ್ಟ್ರೀಯ ಕಾರ್ಯದರ್ಶಿ ಜಾಫರ್ ಫೈಝಿ, ಸುಳ್ಳು ಪ್ರಕರಣದಲ್ಲಿ ಮೌಲಾನಾ ಕಲೀಂ ಸಿದ್ದೀಖಿ ಅವರನ್ನು ಯು.ಪಿ.ಪೊಲೀಸರು ಬಂಧಿಸಿದ್ದಾರೆ. ಇಸ್ಲಾಮ್ ಧರ್ಮದ ಶಾಂತಿಯ ಸಂದೇಶವನ್ನು ನೀಡುತ್ತಿದ್ದ ಮೌಲಾನಾ ಅವರ ಬಂಧನ ಜಾತ್ಯತೀತ, ಪ್ರಜಾಪ್ರಭುತ್ವ ತತ್ವಗಳಿಗೆ ಮಾಡಿರುವ ಅವಮಾನವಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಮೌಲಾನಾ ಅವರು ನಡೆಸುತ್ತಿರುವ ಶಾಂತಿಯುತ ಧರ್ಮ ಪ್ರಚಾರ ಮತ್ತು ಧಾರ್ಮಿಕ ಕಾರ್ಯಚಟುವಟಿಕೆಗಳ ಬಗ್ಗೆ ಸರ್ಕಾರ ಮತ್ತು ಅಧಿಕಾರಿಗಳಿಗೂ ಸ್ಪಷ್ಟ ಮಾಹಿತಿ ಇದೆ. ಮೌಲಾನಾ ಅವರು ಎಂದೂ ಬಲವಂತದ ಮತಾಂತರಕ್ಕೆ ಪ್ರಯತ್ನಿಸಿದವರಲ್ಲ. ಆದರೆ ಷಡ್ಯಂತರದ ಭಾಗವಾಗಿ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಈ ಬಂಧನದ ಹಿಂದೆ ಇಡೀ ಮುಸ್ಲಿಮ್ ಸಮುದಾಯವನ್ನು ಭಯಪಡಿಸುವ ಹುನ್ನಾರ ಅಡಗಿದೆ. ಇದನ್ನು ಇಮಾಮ್ಸ್ ಕೌನ್ಸಿಲ್ ತೀವ್ರವಾಗಿ ಖಂಡಿಸುತ್ತದೆ. ಅವರ ಬಂಧನವಾದ ಕೂಡಲೇ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ನಾಳೆ ಶುಕ್ರವಾರ ಜುಮಾ ನಮಾಝ್ ನ ಬಳಿಕ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

- Advertisement -


ಅವರವರ ಧರ್ಮದ ಪ್ರಚಾರ ಮಾಡುವುದು ತಪ್ಪಲ್ಲ. ಅದು ಸಂವಿಧಾನ ನೀಡಿದ ಮೂಲಭೂತ ಹಕ್ಕು ಮತ್ತು ಧಾರ್ಮಿಕ ಸ್ವಾತಂತ್ರ್ಯದ ಭಾಗ. ಇದನ್ನು ತಡೆಯುವ ವ್ಯವಸ್ಥಿತ ಷಡ್ಯಂತರವಾಗಿದೆ. ಮತಾಂತರ ಆರೋಪ ಹೊರಿಸಿ ಧರ್ಮ ಪ್ರಚಾರಕರನ್ನು ಬಂಧಿಸಿ ಹಿಂಸೆ ಕೊಡುವುದು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಫೈಝಿ ಹೇಳಿದ್ದಾರೆ.

ಮೌಲಾನಾ ಕಲೀಂ ಸಿದ್ದೀಖಿ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು, ಅವರ ವಿರುದ್ಧ ದಾಖಲಿಸಿರುವ ಸುಳ್ಳು ಮೊಕದ್ದಮೆಯನ್ನು ರದ್ದುಪಡಿಸಬೇಕು. ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರ ಮತ್ತು ಧಾರ್ಮಿಕ ಮುಖಂಡರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು ಸರ್ಕಾರಗಳು ನಿಲ್ಲಿಸಬೇಕು ಎಂದು ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಹೋರಾಟದಲ್ಲಿ ದೇಶದ ಎಲ್ಲಾ ಉಲಮಾ ಸಂಘಟನೆಗಳು, ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರು ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.



Join Whatsapp