ವಾರಣಾಸಿಯ ಕಾಶಿ ಮಸೀದಿ ಮತ್ತು ಇತರ ಮಸೀದಿಗಳ ವಿರುದ್ಧ ಸಂಘ ಪರಿವಾರ ನಡೆಸುತ್ತಿರುವ ಷಡ್ಯಂತ್ರದ ವಿರುದ್ಧ ಜಾತ್ಯತೀತ ಪಕ್ಷದ ನಾಯಕರು, ಧಾರ್ಮಿಕ ಮುಖಂಡರು ಮತ್ತು ಸಾಮಾಜಿಕ ಕಾರ್ಯಕರ್ತರು ಮೌನ ಮುರಿದು ದೃಢವಾದ ನಿಲುವು ತೆಗೆದುಕೊಳ್ಳಬೇಕೆಂದು ಬೆಂಗಳೂರಿನಲ್ಲಿ ನಡೆದ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಮುಫ್ತಿ ಹನೀಫ್ ಅಹ್ರಾರ್ ಖಾಸಿಮಿ ರಾಷ್ಟ್ರೀಯ ಸಮಿತಿಯ ಸಭೆಯಲ್ಲಿ ಕರೆ ನೀಡಿದ್ದಾರೆ.
ಆರಾಧನಾಲಯಗಳ ವಿರುದ್ಧದ ಈ ನಡೆಯು ಅಸಂವಿಧಾನಿಕವಾಗಿದೆ. ಯಾವುದೇ ಅನ್ಯಾಯದ ನಿರ್ಧಾರವನ್ನು ಮುಸ್ಲಿಮರು ಒಪ್ಪಲು ಸಾಧ್ಯವಿಲ್ಲ. ಬಾಬರಿ ಮಸೀದಿಯನ್ನು ಹಿಂಸಾತ್ಮಕವಾಗಿ ನೆಲಸಮಗೊಳಿಸಿ ಅನ್ಯಾಯವಾಗಿ ಸ್ವಾಧೀನಪಡಿಸಿಕೊಂಡ ರೀತಿ ಹಿಂದುತ್ವ ಭಯೋತ್ಪಾದಕರಿಗೆ ಇನ್ನು ಮುಂದೆ ಯಾವುದೇ ಆರಾಧನಾಲಯಗಳನ್ನು ಸ್ವಾಧೀನಪಡಿಸಿಕೊಳ್ಳಲು ಅನುಮತಿಸುವುದಿಲ್ಲ. ಬಾಬರಿ ಮಸೀದಿಯನ್ನು ಬಲವಂತವಾಗಿ ವಶಪಡಿಸಿಕೊಂಡಾಗಿನಿಂದ ಹಿಂದುತ್ವವಾದಿಗಳ ಸ್ಥೈರ್ಯ ಹೆಚ್ಚುತ್ತಿದೆ.
ಅವರು ಮಸೀದಿಗಳ ವಿರುದ್ಧ ಸುಳ್ಳು ಪ್ರಚಾರಗಳನ್ನು ಹರಡಿ ಅದನ್ನು ವಶಪಡಿಸಿ ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅದರೊಂದಿಗೆ ದಲಿತರ ಪೂಜಾ ಸ್ಥಳಗಳು ಮತ್ತು ಸಿಖ್ ಗುರುದ್ವಾರದ ಮೇಲೆಯೂ ದಾಳಿ ನಡೆಯುತ್ತಿದೆ. ದೇಶದ ವಿವಿಧ ಭಾಗಗಳಲ್ಲಿ ಮುಸ್ಲಿಮರ ಆರಾಧನಾಲಯಗಳೊಂದಿಗೆ ಧಾರ್ಮಿಕ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಪಿತೂರಿಗಳು ನಡೆಯುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.