ಅಕ್ರಮ ಪಠ್ಯ ಪರಿಷ್ಕರಣೆ; ಕನ್ನಡ ಪ್ರಜ್ಞೆಗೆ ಅಪಮಾನ: ಸಾಹಿತಿ ಎಸ್‌.ಜಿ. ಸಿದ್ದರಾಮಯ್ಯ

Prasthutha|

ಶಿವಮೊಗ್ಗ: ಅನಧಿಕೃತ ನೇಮಕಾತಿಯ ಮೂಲಕ ಅಕ್ರಮ ಪಠ್ಯ ಪರಿಷ್ಕರಣೆಯನ್ನು ಈ ಸರ್ಕಾರ ಸಕ್ರಮಗೊಳಿಸಿದ ರೀತಿಯಿಂದ ಇಡೀ ಕನ್ನಡ ಪ್ರಜ್ಞೆಗೆ ಅಪಮಾನವಾಗಿದೆ ಎಂದು ಸಾಹಿತಿ ಎಸ್‌.ಜಿ.ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

- Advertisement -

ಕುಪ್ಪಳ್ಳಿಯ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಬುಧವಾರ ಬೆಳಿಗ್ಗೆ ನಡೆದ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಡಿನ ಕನ್ನಡ ಪ್ರಜ್ಞೆ, ಬಹುತ್ವ ಭಾರತದ ಸಂಕೇತವಾದ ನಾಡಗೀತೆ. ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಈ ಅಮೂಲ್ಯ ನುಡಿಯನ್ನು ತಿರುಚಿರುವುದು ಬರೀ ರಾಷ್ಟ್ರಕವಿಗೆ ಮಾತ್ರವಲ್ಲ ಇಡೀ ಕನ್ನಡಕ್ಕೆ ಕನ್ನಡ ಬದುಕಿಗೆ ಮಾಡಿರುವ ಅಪಮಾನ. ಅಂತಹ ವ್ಯಕ್ತಿಯನ್ನು ಪಠ್ಯಪರಿಷ್ಕರಣೆ ಸಮಿತಿ ಅಧ್ಯಕ್ಷನನ್ನಾಗಿ ಮಾಡಿದ್ದು ಸರ್ಕಾರದ ಬೇಜವಾಬ್ದಾರಿ ನಡೆ ಎಂದು ಹೇಳಿದರು.

ನಮ್ಮ ಒಕ್ಕೂಟ ವ್ಯವಸ್ಥೆ, ಪ್ರಜಾಪ್ರಭುತ್ವ ಉಳಿಸಿಕೊಳ್ಳುವ ಶಿಕ್ಷಣವನ್ನು ಕೊಡುವುದು ಬಿಟ್ಟು ದೇಶ ಭಕ್ತಿಯ ಹೆಸರಿನಲ್ಲಿ ವಿಕಾರಗಳನ್ನು, ದ್ವೇಷವನ್ನು ಪ್ರಚೋದಿಸುವ ಪಠ್ಯಗಳನ್ನು ನಾವು ಬೋಧಿಸಬೇಕೇ ಎಂದು ಪ್ರಶ್ನಿಸಿದರು.

- Advertisement -

ಕುವೆಂಪು ಕನ್ನಡ ಮಾತ್ರವಲ್ಲದೇ ಇಡೀ ಭಾರತದ ಪ್ರಜ್ಞೆಯ ಪ್ರತೀಕ. ಸರ್ಕಾರಕ್ಕೆ ನಿಜವಾಗಲೂ ಆತ್ಮಸಾಕ್ಷಿ ಇದ್ದರೆ ಈ ಪಠ್ಯವನ್ನು ಹಿಂಪಡೆದು ಹಿಂದಿನ ಪಠ್ಯ ಮುಂದುವರೆಸಲಿ. ಆ ಮೇಲೆ ಬೇಕಿದ್ದರೆ ನಿಜವಾದ ಶಿಕ್ಷಣ ತಜ್ಞರನ್ನು ನೇಮಕ ಮಾಡಿ ಪರಿಷ್ಕರಣೆಗೆ ಮುಂದಾಗಲಿ. ಅದಕ್ಕೆ ಸಹಮತ ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು.

Join Whatsapp