ಶೂದ್ರರಿಗೆ ಶೂದ್ರರೆಂದರೆ ಬೇಜಾರಾಗುವುದೇಕೆ? | ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಮಾಲೆಗಾಂವ್ ಸ್ಫೋಟ ಆರೋಪಿ, ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್

Prasthutha|

ನವದೆಹಲಿ : ಮಾಲೆಗಾಂವ್ ಸ್ಫೋಟ ಆರೋಪಿ, ಬಿಜೆಪಿಯ ಭೋಪಾಲ್ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಮತ್ತೊಮ್ಮೆ ಗಂಭೀರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶೂದ್ರರಿಗೆ ಶೂದ್ರರು ಎಂದರೆ ಯಾಕೆ ಬೇಜಾರಾಗಬೇಕು? ಎಂಬರ್ಥದಲ್ಲಿ ಅವರು ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ್ದಾರೆ. ಕ್ಷತ್ರಿಯ ಮಹಾಸಭಾ ಸಭೆಯೊಂದರಲ್ಲಿ ಅವರು ಮಾತನಾಡಿದ್ದರು.

“ನಮ್ಮ ಧರ್ಮಶಾಸ್ತ್ರಗಳಲ್ಲಿ ಸಮಾಜವನ್ನು ನಾಲ್ಕು ವರ್ಗಗಳಾಗಿ ವಿಭಜಿಸಲಾಗಿದೆ. ಕ್ಷತ್ರಿಯರಿಗೆ ಕ್ಷತ್ರಿಯರು ಎಂದರೆ ಬೇಜಾರಾಗುವುದಿಲ್ಲ, ಬ್ರಾಹ್ಮಣರಿಗೆ ಬ್ರಾಹ್ಮಣರೆಂದು ಕರೆದರೆ ಅವರಿಗೂ ಬೇಜಾರಾಗುವುದಿಲ್ಲ. ವೈಶ್ಯರಿಗೆ ವೈಶ್ಯರೆಂದು ಕರೆದರೂ ಬೇಜಾರಾಗುವುದಿಲ್ಲ. ಶೂದ್ರರಿಗೆ ಶೂದ್ರರೆಂದು ಕರೆದರೆ ಬೇಜಾರಾಗುತ್ತದೆ. ಕಾರಣ ಏನು? ಯಾಕೆಂದರೆ, ಅಜ್ಞಾನದಿಂದಾಗಿ ಅವರು ಅದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ’’ ಎಂದು ಠಾಕೂರ್ ಹೇಳಿದ್ದಾರೆ.

- Advertisement -

ಯಾರು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೋ, ಅವರಿಗೆ ಜನಸಂಖ್ಯಾ ನಿಯಂತ್ರಣ ಕಾನೂನು ಅನ್ವಯವಾಗಬೇಕು, ಯಾರು ದೇಶಕ್ಕಾಗಿ ಜೀವಿಸುತ್ತಾರೋ ಅವರಿಗೆ ಅದು ಅನ್ವಯವಾಗಬಾರದು ಎಂದೂ ಅವರು ಹೇಳಿದ್ದಾರೆ.

“ಮೀಸಲಾತಿ ಬಡವರಿಗೆ ಸಹಾಯ ಮಾಡಲು ಆರ್ಥಿಕ ಆಧಾರದಲ್ಲಿರಬೇಕೇ ಹೊರತು, ಜಾತಿ ಆಧಾರಿತವಾಗಿರಕೂಡದು’’ ಎಂದೂ ಅವರು ವಿವಾದಕ್ಕೆ ಕಾರಣವಾಗಿದ್ದಾರೆ.

ಇಂದಿನ ಕ್ಷತ್ರಿಯರು ತಮ್ಮ ಕರ್ತವ್ಯಗಳನ್ನು ಅರ್ಥ ಮಾಡಿಕೊಳ್ಳಬೇಕು, ಅವರು ತಮ್ಮಲ್ಲಿ ಹೆಚ್ಚು ಹೆಚ್ಚು ಮಕ್ಕಳನ್ನು ಹುಟ್ಟಿಸಿ, ಅವರನ್ನು ಸೇನೆಗೆ ಸೇರ್ಪಡೆಗೊಳಿಸಿ, ಅವರು ದೇಶದ ಭದ್ರತೆಗಾಗಿ ಹೋರಾಡುವಂತೆ ಮಾಡಬೇಕು ಎಂದೂ ಅವರು ಹೇಳಿದ್ದಾರೆ.  

- Advertisement -