ಸಾವರ್ಕರ್ ಹೆಸರಿನ ವೃತ್ತ ನಿರ್ಮಾಣಕ್ಕೆ ಮುಂದಾದರೆ ಅದನ್ನು ತಡೆಯುತ್ತೇವೆ: ಅಬೂಬಕ್ಕರ್ ಕುಳಾಯಿ

Prasthutha|

ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಕ್ಷೇತ್ರದ ಅಭಿವೃದ್ಧಿಯ ಕಡೆಗೆ ಗಮನ ಹರಿಸದೇ ಅನಗತ್ಯ ವಿಚಾರಗಳನ್ನು ಮುನ್ನೆಲೆಗೆ ತಂದು ತನ್ನ ಮತ ಬ್ಯಾಂಕನ್ನು ಗಟ್ಟಿಗೊಳಿಸುವ ಕೊಳಕು ರಾಜಕೀಯವನ್ನು ಮಾಡುತ್ತಿದ್ದಾರೆ. ವಿವಾದಿತ ವ್ಯಕ್ತಿ, ಬ್ರಿಟಿಷರಿಗೆ ಕ್ಷಮಾಪಣೆಯ ಮೂಲಕ ಶರಣಾಗತಿಯಾದ ಸಾವರ್ಕರ್ ಹೆಸರಿನ ವೃತ್ತವನ್ನು ಸುರತ್ಕಲ್ ಜಂಕ್ಷನ್ ನಲ್ಲಿ ಮಾಡಲು ಹೊರಟಿರುವುದು ಶಾಸಕರ ಹೇಡಿತನ ಕೆಲಸವಾಗಿದೆ. ಮೊದಲೇ ಕೋಮು ಸೂಕ್ಷ್ಮ ಪ್ರದೇಶವಾದ ಸುರತ್ಕಲ್ ನಲ್ಲಿ ವಿವಾದಿತ ವ್ಯಕ್ತಿ ಸಾವರ್ಕರ್ ಹೆಸರಿಡುವಂತೆ ಪಾಲಿಕೆ ಮೇಲೆ ಒತ್ತಡ ಹೇರುತ್ತಿರುವ ಶಾಸಕರ ನಡೆ ಖಂಡನೀಯ. ಇಂತಹ ಕೆಲಸಕ್ಕೆ ಪಾಲಿಕೆ ಸಹಕರಿಸಿ ಅದಕ್ಕೆ ಅವಕಾಶ ಒದಗಿಸಿದರೆ ಅದನ್ನು ಎಸ್ ಡಿಪಿಐ ಖಂಡಿತವಾಗಿಯೂ ತಡೆಯಲಿದೆ ಎಂದು ಎಸ್ ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಎಚ್ಚರಿಸಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಳೆದ ನಾಲ್ಕು ವರ್ಷಗಳಿಂದ ಶಾಸಕರಾಗಿರುವ ಭರತ್ ಶೆಟ್ಟಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಮಹಾನಗರ ಪಾಲಿಕೆ ಮತ್ತು ಗ್ರಾಮಾಂತರ ಪ್ರದೇಶವನ್ನು ಹೊಂದಿರುವ ಉತ್ತರ ವಿಧಾನಸಭಾ ಕ್ಷೇತ್ರವು ಇಂದು ಜಿಲ್ಲೆಯಲ್ಲಿ ಅತ್ಯಂತ ಅಭಿವೃದ್ಧಿ ಕುಂಠಿತ ಕ್ಷೇತ್ರವಾಗಿದೆ. ಇದು ಶಾಸಕರು ಕ್ಷೇತ್ರಕ್ಕೆ ನೀಡಿದ ಕೊಡುಗೆಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಹಲವಾರು ಸರಕಾರಿ ಹಾಗೂ ಖಾಸಗಿ ಒಡೆತನದ ಉದ್ಯಮಗಳು ಈ ಕ್ಷೇತ್ರ ವ್ಯಾಪ್ತಿಯಲ್ಲಿ ಇದ್ದರೂ ಇಲ್ಲಿ ಸ್ಥಳೀಯವಾಗಿ ಬಹಳಷ್ಟು ಸಮಸ್ಯೆಗಳಿವೆ. ಸ್ಥಳೀಯರಿಗೆ ಉದ್ಯೋಗದಿಂದ ವಂಚನೆ, ಗಂಭೀರವಾದ ಪರಿಸರ ಮಾಲಿನ್ಯದಂತಹ ಸಮಸ್ಯೆಗಳಿವೆ. ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಹಿಂದಿನ ಶಾಸಕರು ಆರಂಭಿಸಿದ ಬಹು ನಿರೀಕ್ಷಿತ ಸುರತ್ಕಲ್ ಮಾರುಕಟ್ಟೆ ಸಂಕೀರ್ಣ ಕಾಮಗಾರಿ ಕಳೆದ ನಾಲ್ಕು ವರ್ಷದಿಂದ ತಟಸ್ಥಗೊಂಡಿದೆ. ಕನಿಷ್ಠ ಪಕ್ಷ ತನ್ನ ಸ್ವಪಕ್ಷೀಯ ಕಾರ್ಯಕರ್ತರನ್ನು ಕೂಡಾ ವಿಶ್ವಾಸಕ್ಕೆ ತೆಗೆದುಕೊಳ್ಳಲು ವಿಫಲರಾದ ಶಾಸಕರು, ಇದೀಗ ಚುನಾವಣೆ ಹತ್ತಿರ ಬರುವಾಗ ಸಾವರ್ಕರ್ ಫೋಟೋ ಹಿಡಿದು ವಿವಾದಗಳನ್ನು ಸೃಷ್ಟಿಸಲು ಹೊರಟಿರುವುದು ನಾಚಿಕೆಗೇಡಿನ ವಿಚಾರವಾಗಿದೆ. ಚುನಾವಣೆ ಹತ್ತಿರ ಬರುವಾಗ ತನ್ನ ಸರಕಾರಿ ಕಚೇರಿಯಲ್ಲಿ ಸಾವರ್ಕರ್ ಫೋಟೋ ಮತ್ತು ಒಂದು ಧರ್ಮದ ಸಂಕೇತವಿರುವ ಫೊಟೋಗಳನ್ನು ಅಳವಡಿಸುವ ಮೂಲಕ ಶಾಸಕರು ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ ಎಂದು ಅಬೂಬಕ್ಕರ್ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಕ್ಷೇತ್ರದಲ್ಲಿ ಅಭಿವೃದ್ಧಿ ಸಂಪೂರ್ಣವಾಗಿ ಕುಂಠಿತವಾಗಿದೆ. ಕೋವಿಡ್ ಹಾಗೂ ಅಧಿಕ ಮಳೆ ಸುರಿದು ಜನಸಾಮಾನ್ಯರು ಸಂಕಷ್ಟದಲ್ಲಿದಂತಹ ಸಮಯದಲ್ಲಿ ಬಾಯಿಗೆ ಬೀಗಹಾಕಿ ಕುಳಿತ ಶಾಸಕರು, ಕೇವಲ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಕ್ಷೇತ್ರದಾದ್ಯಂತ ತನ್ನ ಚೇಲಾಗಳಿಂದ ನಡೆಯದ ಕಾಮಗಾರಿಗಳ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸುವ ಮೂಲಕ ಪುಕ್ಕಟೆ ಪ್ರಚಾರ ಗಿಟ್ಟಿಸುತ್ತಿದ್ದಾರೆ. ಇದನ್ನು ಕ್ಷೇತ್ರದ ಮತದಾರರು ಅರ್ಥಮಾಡಿಕೊಳ್ಳಬೇಕು. ಕೋವಿಡ್ ಸಂದರ್ಭದಲ್ಲಿ ತನ್ನದೇ ಕ್ಷೇತ್ರದಲ್ಲಿ ಮೃತಪಟ್ಟ ಹಿಂದೂ ಸಮುದಾಯದ ವ್ಯಕ್ತಿಯ ಅಂತ್ಯಕ್ರಿಯೆಗೂ ಅವಕಾಶ ಕೊಡದೇ ಮೃತ ಶರೀರವನ್ನು ವಾಪಸು ಕಳಿಸಿದ ಶಾಸಕರ ಅಮಾನವೀಯ ನಡೆಯನ್ನು ಜನರು ಮರೆತಿಲ್ಲ. ಹಿಂದೂ ಸಮುದಾಯದ ವ್ಯಕ್ತಿಯ ಅಂತ್ಯಕ್ರಿಯೆಗೆ ಅನುಮತಿ ನೀಡದ ಶಾಸಕ ಭರತ್ ಶೆಟ್ಟಿ ಯಾವ ಸೀಮೆಯ ಹಿಂದೂ ರಕ್ಷಕ ಎಂದು ಅಬೂಬಕ್ಕರ್ ಕುಳಾಯಿ ಪ್ರಶ್ನಿಸಿದ್ದಾರೆ.

ಪಾಲಿಕೆ ಅಧೀನದಲ್ಲಿರುವ ಸರಕಾರಿ ಕಚೇರಿಯಲ್ಲಿ ಈಗಾಗಲೇ ಅಳವಡಿಸಿರುವ ಫೊಟೋಗಳನ್ನು ಅಧಿಕಾರಿಗಳು ತೆರವುಗೊಳಿಸಬೇಕು. ಸರಕಾರಿ ಕಚೇರಿ ಎನ್ನುವುದು ಶಾಸಕರ ಮನೆಯ ಆಸ್ತಿಯಲ್ಲ, ಜನಸಾಮಾನ್ಯರ ತೆರಿಗೆಯಿಂದ ಕಟ್ಟಿದ ಕಟ್ಟಡವಾಗಿದೆ. ಸರಕಾರಕ್ಕೆ ಯಾವುದೇ ಧರ್ಮವಿಲ್ಲ, ಸರಕಾರವು ಯಾವುದೇ ಧರ್ಮದ ಪರ ಅಥವಾ ವಿರುದ್ಧ ಇರಬಾರದು ಇದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಹಾಗೂ ವಿವಾದಿತ ವ್ಯಕ್ತಿ ಸಾವರ್ಕರ್ ಹೆಸರನ್ನು ವೃತ್ತಕ್ಕೆ ನಾಮಕರಣ ಮಾಡಲು ಪಾಲಿಕೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಯಾವುದೇ ರೀತಿಯಲ್ಲಿ ಅವಕಾಶ ಒದಗಿಸಬಾರದು. ಒಂದು ವೇಳೆ ಇದಕ್ಕೆ ಪಾಲಿಕೆ ಮುಂದಾದರೆ ಅದನ್ನು ಎಸ್ ಡಿಪಿಐ ತಡೆಯಲಿದೆ ಹಾಗೂ ಇದರಿಂದ ಏನಾದರೂ ಸಮಸ್ಯೆಗಳಾದರೆ ಅದಕ್ಕೆ ಜಿಲ್ಲಾಡಳಿತ, ಪೋಲಿಸ್ ಇಲಾಖೆ ಮತ್ತು ಪಾಲಿಕೆ ನೇರ ಹೊಣೆಯಾಗಳಿದೆ ಎಂದು ಅಬೂಬಕ್ಕರ್ ಕುಳಾಯಿ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

Join Whatsapp