“ಬಡವರಿಗೆ ಹೆಚ್ಚಿನ ಪಡಿತರ ಬೇಕಾದರೆ ಹೆಚ್ಚಿನ ಮಕ್ಕಳಿಗೆ ಜನ್ಮ ನೀಡಬೇಕು”

Prasthutha|

ಬಡವರು ಹೆಚ್ಚಿನ ಪಡಿತರವನ್ನು ಪಡೆಯಲು ಬಯಸುವುದಾದರೆ ಹೆಚ್ಚಿನ ಮಕ್ಕಳಿಗೆ ಜನ್ಮ ನೀಡಬೇಕು ಎಂದು ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಹೇಳಿದ್ದಾರೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ಹೆಚ್ಚಿನ ಪಡಿತರವನ್ನು ಪಡೆಯಲು, ಕುಟುಂಬದಲ್ಲಿ ಕನಿಷ್ಠ 20 ಮಕ್ಕಳು ಇರಬೇಕಾಗಿತ್ತು ಎಂದು ರಾವತ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

- Advertisement -

ಪ್ರಧಾನ ಮಂತ್ರಿಯವರ ಗರೀಬ್ ಕಲ್ಯಾಣ್ ಯೋಜನೆಯಡಿ ಸರಕಾರ ಪ್ರತಿ ಮನೆಗೂ 5 ಕೆಜಿ ಪಡಿತರವನ್ನು ನೀಡುತ್ತದೆ. ಮನೆಯಲ್ಲಿ ಹತ್ತು ಜನರಿದ್ದರೆ ಅವರಿಗೆ 50 ಕೆಜಿ ಪಡಿತರ ಸಿಗುತ್ತದೆ. 20 ಜನರಿದ್ದರೆ, ಒಂದು ಕ್ವಿಂಟಾಲ್ ಸಿಗುತ್ತದೆ. ಕೆಲವರಿಗೆ ಹತ್ತು ಕಿಲೋ ಇನ್ನೂ ಕೆಲವರಿಗೆ ಕ್ವಿಂಟಾಲ್ ಸಿಗುತ್ತದೆ ಎಂದು ಕೆಲವರು ಅಸೂಯೆ ಪಡುತ್ತಾರೆ. “ನಿಮಗೆ ಸಮಯ ಇರುವಾಗ ಇಪ್ಪತ್ತು ಮಕ್ಕಳಿಗೆ ಜನ್ಮ ನೀಡುವ ಬದಲು, ನೀವು ಇಬ್ಬರು ಮಕ್ಕಳಿಗೆ ಜನ್ಮ ನೀಡಿರುವುದು ಇದಕ್ಕೆಲ್ಲಾ ಕಾರಣ ಎಂದು ತಿರಥ್ ಸಿಂಗ್ ರಾವತ್ ಹೇಳಿದ್ದಾರೆ.

ಹೊಸದಾಗಿ ನೇಮಕಗೊಂಡ ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಅವರು ಈ ಹಿಂದೆ ಮಹಿಳಾ ವಿರೋಧಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಹರಿದ ಜೀನ್ಸ್ ಧರಿಸುವುದು ಭಾರತೀಯ ಸಂಸ್ಕೃತಿಗೆ ಅನುಗುಣವಾದುದಲ್ಲ, ಇದನ್ನು ಸಾರ್ವಜನಿಕವಾಗಿ ಧರಿಸುವವರು ಮಕ್ಕಳಿಗೆ ಯಾವ ಸಂದೇಶವನ್ನು ನೀಡುತ್ತಿದ್ದೀರಿ ಎಂದು ತಿರಥ್ ಸಿಂಗ್ ರಾವತ್ ಕೇಳಿದ್ದರು.

- Advertisement -