ಅನುದಾನ ಹಂಚಿಕೆಯಲ್ಲಿನ ತಾರತಮ್ಯ ಸರಿಪಡಿಸದಿದ್ದರೆ ಬಿಬಿಎಂಪಿ ಕಚೇರಿ ಮುಂದೆ ಧರಣಿ: ರಾಮಲಿಂಗಾ ರೆಡ್ಡಿ

Prasthutha|

ಬೆಂಗಳೂರು: ವಿಧಾನಸಭಾ ಕ್ಷೇತ್ರಗಳಿಗೆ ಬಿಡುಗಡೆ ಮಾಡಲಾಗಿರುವ ಅನುದಾನದಲ್ಲಿ ತಾರತಮ್ಯವೆಸಗಲಾಗಿದ್ದು, ಇದನ್ನು ಸೋಮವಾರದ ಒಳಗೆ ಸರಿಪಡಿಸದಿದ್ದರೆ ಬಿಬಿಎಂಪಿ ಮುಂದೆ ಧರಣಿ ಮಾಡಬೇಕಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೇವಲ 1 ಗಂಟೆಯಲ್ಲಿ 90 ಮಿ.ಮೀಟರ್ ಮಳೆಯಾದರೆ ಸುಮಾರು 100 ಕಡೆಗಳಲ್ಲಿ ಪ್ರವಾಹವಾಗುತ್ತದೆ. ಅದು ಪ್ರಕೃತಿ ವಿಕೋಪ. ಅದನ್ನು ತಡೆಯಲು ಸಾಧ್ಯವಿಲ್ಲ, ಆದರೆ ನಂತರ ಸರ್ಕಾರ ಹೇಗೆ ನಡೆದುಕೊಳ್ಳಲಿದೆ ಎಂಬುದು ಮುಖ್ಯ. ಇತ್ತೀಚೆಗೆ ಅತಿಯಾದ ಮಳೆ ಬಿದ್ದಾಗ ಮುಖ್ಯಮಂತ್ರಿಗಳು 1500 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದರು. ಮಾತೆತ್ತಿದರೆ ಅವರು ಬೆಂಗಳೂರು ಅಭಿವೃದ್ಧಿ ಎಂದು ಹೇಳುತ್ತಾರೆ. ಅವರ ಪ್ರಕಾರ ಬಿಜೆಪಿ ಶಾಸಕರು ಎಲ್ಲಿದ್ದಾರೋ ಅದು ಮಾತ್ರ ಬೆಂಗಳೂರು ಎಂದು ತಿಳಿದುಕೊಂಡಿದ್ದಾರೆ. ಬೆಂಗಳೂರಿನಲ್ಲಿ 28 ವಿಧಾನಸಭಾ ಕ್ಷೇತ್ರವಿದ್ದು, ಈ ಎಲ್ಲ ಕ್ಷೇತರಗಳು ಅಭಿವೃದ್ಧಿ ಆದರೆ ಮಾತ್ರ ಬೆಂಗಳೂರು ಅಭಿವೃದ್ಧಿಯಾದಂತೆ. ಈ ಕ್ಷೇತ್ರಗಳಿಗೆ ಅನುದಾನ ನೀಡಬೇಕು ಎಂದರು.

ಕಾಂಗ್ರೆಸ್ ಸರ್ಕಾರ ಇದ್ದಾಗ, ಸಮ್ಮಿಶ್ರ ಸರ್ಕಾರದಲ್ಲಿ ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ಸರಾಸರಿ 150 ಕೋಟಿಯಷ್ಟು ಅನುದಾನ ನೀಡಿದ್ದೆವು. ನಾವು ಸ್ವಲ್ಪ ಹೆಚ್ಚಿನ ಅನುದಾನ ಪಡೆದಿದ್ದು, ಹೊರವಲಯದ ಕ್ಷೇತ್ರಗಳಿಗೆ ಅಭಿವೃದ್ಧಿ ಮಾಡಲು ಹೆಚ್ಚಿನ ಅನುದಾನ ನೀಡಿದ್ದೆವು. ನಿನ್ನೆ ಮುಖ್ಯಮಂತ್ರಿಗಳು ಬೆಂಗಳೂರಿನ ಅಭಿವೃದ್ಧಿಗೆ 1500 ಕೋಟಿ ರೂ. ಅನುದಾನ ನೀಡಿದ್ದು, ಅದರಲ್ಲಿ 298 ಕೆಲಸಗಳನ್ನು ಗುರುತಿಸಿದ್ದಾರೆ. ಮಳೆ ಬಂದಾಗ ನನ್ನ ಕ್ಷೇತ್ರಕ್ಕೆ ಸಂಬಂಧಿಸಿದಂತೆ 10 ತಿಂಗಳ ಹಿಂದೆ ನಾನು ಕೂಡ ಆಯುಕ್ತರಿಗೆ ಪತ್ರ ಬರೆದಿದ್ದೆ. ಅದರಲ್ಲಿ ನಾನು ನಾಲ್ಕು ಕಾಮಗಾರಿಗಳಿಗಾಗಿ 25 ಕೋಟಿ ಹಣ ಬೇಕು ಎಂದು ಕೇಳಿದ್ದೆ. ಸರ್ಕಾರ ಈಗ ಕಾರ್ಯಯೋಜನೆ ಮೂಲಕ ನಗರಾಭಿವೃದ್ಧಿ ಸಚಿವಾಲಯಕ್ಕೆ ಹಣ ನೀಡಲಾಗಿದೆ. ಇದರಲ್ಲಿ ತಾರತಮ್ಯ ಮಾಡಿದ್ದಾರೆ. ಕಾಂಗ್ರೆಸ್ ನ ಸರ್ವಜ್ಞ ನಗರ, ಶಾಂತಿನಗರ, ಶಿವಾಜಿನಗರ, ಹೆಬ್ಬಾಳ, ಪುಲಕೇಶಿನಗರ, ಚಾಮರಾಜಪೇಟೆ, ವಿಜಯನಗರ, ಬ್ಯಾಟರಾಯನಪುರದ 9 ಶಾಸಕರಿಗೆ 248.29 ಕೋಟಿ ರೂ. ಅನುದಾನ ನೀಡಿದ್ದರೆ, ಬಿಜೆಪಿ 15 ಶಾಸಕರಿಗೆ 1100.34 ಕೋಟಿ ರೂ. ನೀಡಿದ್ದಾರೆ. ಜೆಡಿಎಸ್ ನ ದಾಸರಹಳ್ಳಿ ಶಾಸಕರಿಗೆ 125 ಕೋಟಿ ರೂ. ನೀಡಿದ್ದಾರೆ. ದೇವೇಗೌಡರು ಹೋಗಿ ಪ್ರತಿಭಟನೆ ಮಾಡಿದ್ದಕ್ಕೆ ಕೊಟ್ಟಿದ್ದಾರೆ. ಅಗತ್ಯ ಇರುವ ಕಡೆ ಕೊಡಲಿ ನಾವು ಅದನ್ನು ಪ್ರಶ್ನಿಸುವುದಿಲ್ಲ ಎಂದು ಹೇಳಿದರು.

- Advertisement -

ಇನ್ನು ಜಯನಗರ ಹಾಗೂ ಬಿಟಿಎಂ ಕ್ಷೇತ್ರಕ್ಕೆ ಒಂದೇ ಒಂದು ಪೈಸೆ ಅನುದಾನವನ್ನು ನೀಡಿಲ್ಲ. ಮಳೆಗಾಲದಲ್ಲಿ ಜಯನಗರ, ಬಿಟಿಎಂ ಲೇಔಟ್ ಕ್ಷೇತ್ರಗಳಲ್ಲಿ ಪ್ರವಾಹ ಉಂಟಾಗಿರಲಿಲ್ಲವೇ? ನಾನು ಈ ವಿಚಾರವಾಗಿ ಎರಡನೇ ತಿಂಗಳಲ್ಲೇ ಬ್ರಿಡ್ಜ್ ಸೇರಿದಂತೆ ಇತರೆ ಕೆಲಸಗಳ ಬಗ್ಗೆ ಹಣ ಬೇಕು ಎಂದು ಆಯುಕ್ತರು ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಸರ್ಕಾರ ಯಾವ ಕಾರಣಕ್ಕೆ ಈ ಎರಡು ಕ್ಷೇತ್ರಗಳಿಗೆ ನಯಾಪೈಸೆ ಹಣ ನೀಡಿಲ್ಲ ಎಂದು ಮುಖ್ಯಮಂತ್ರಿಗಳನ್ನು ಕೇಳುತ್ತೇನೆ? ಇನ್ನು ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹಾಗೂ ಗೌರವ್ ಗುಪ್ತಾ ಅವರಿದ್ದು, ಈ ವಿಚಾರವಾಗಿ ನಾನು ಅವರ ಜತೆ ಮಾತನಾಡಿದ್ದೇನೆ. ಅವರು ಈ ವಿಚಾರವಾಗಿ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.

ಸೋಮವಾರದ ಒಳಗೆ ಈ ವಿಚಾರ ಬಗೆಹರಿಸದಿದ್ದರೆ ಬಿಬಿಎಂಪಿ ಮುಂದೆ ಧರಣಿ ಮಾಡಬೇಕಾಗುತ್ತದೆ. ಕೋವಿಡ್ ಇರುವ ಹಿನ್ನೆಲೆಯಲ್ಲಿ ನಾನು ಹಾಗೂ ಜಯನಗರ ಶಾಸಕಿ ಸೌಮ್ಯರೆಡ್ಡಿ ಅವರು ನಾವಿಬ್ಬರೇ ಧರಣಿ ಮಾಡುತ್ತೇವೆ. ನಂತರವೂ ಸರ್ಕಾರ ಈ ಸಮಸ್ಯೆ ಬಗೆಹರಿಸದಿದ್ದರೆ ಜನವರಿ 12, ಬುಧವಾರ ಮುಖ್ಯಮಂತ್ರಿಗಳ ಕಚೇರಿ ಮುಂದೆ ನಾವಿಬ್ಬರೇ ಧರಣಿ ಮಾಡುತ್ತೇವೆ. ಬೇರೆ ಕ್ಷೇತ್ರದ ಕಾಂಗ್ರೆಸ್ ಶಾಸಕರಿಗೆ ಅನುದಾನ ಕಡಿಮೆ ಎನಿಸಿದರೆ ಅವರೂ ಬಂದು ನಮ್ಮ ಜತೆ ಧರಣಿ ಮಾಡಬಹುದು. ನಮಗೆ ಯಾವುದೇ ಅನುದಾನ ನೀಡದಿರುವುದನ್ನು ಪ್ರಶ್ನಿಸಿ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.

ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲವೇ? ಎಂಬ ಪ್ರಶ್ನೆ ಉತ್ತರಿಸಿದ ಅವರು, ‘9ರಂದು ಪಾದಯಾತ್ರೆಯಲ್ಲಿ ಭಾಗವಹಿಸುತ್ತೇವೆ. ನಂತರ ಬೆಂಗಳೂರಿಗೆ ವಾಪಸ್ಸಾಗುತ್ತೇನೆ. ಬೆಂಗಳೂರಿನಲ್ಲಿ ನಡೆಯುವ ಐದು ದಿನಗಳ ಪಾದಯಾತ್ರೆ ಜವಾಬ್ದಾರಿ ನನಗೆ ನೀಡಿದ್ದು, ಅದರ ಸಿದ್ಧತೆ ಮಾಡಿಕೊಳ್ಳುತ್ತೇವೆ’ ಎಂದು ಉತ್ತರಿಸಿದರು.

ಅನುದಾನಕ್ಕೆ ಯಾರು ತಡೆಯೊಡ್ಡಿದ್ದಾರೆ ಎಂಬ ಪ್ರಶ್ನೆಗೆ, ‘ನಾನು ಯಾರ ಮೇಲೂ ಆರೋಪ ಮಾಡುವುದಿಲ್ಲ. ನಮಗೆ ಒಂದು ರೂಪಾಯಿಯೂ ಅನುದಾನ ನೀಡಿಲ್ಲ. ಈ ಸಚಿವಾಲಯ ಇರೋದು ಮುಖ್ಯಮಂತ್ರಿಗಳ ಬಳಿ, ಈ ಪ್ರಸ್ತಾವನೆಯನ್ನು ಆಯುಕ್ತರಿಗೆ ಕಳುಹಿಸಬೇಕಾಗಿತ್ತು. ನಂತರ ರಾಕೇಶ್ ಸಿಂಗ್ ಅವರ ಮೂಲಕ ಮುಖ್ಯಮಂತ್ರಿಗಳ ಬಳಿ ಹೋಗುತ್ತೆ. ಅಧಿಕಾರಿಗಳು ಈ ವಿಚಾರ ಬಗೆಹರಿಸುವುದಾಗಿ ತಿಳಿಸಿದ್ದಾರೆ. ಬಗೆಹರಿಯದಿದ್ದರೆ ನಾವು ಪ್ರತಿಭಟನೆ ಮಾಡುತ್ತೇವೆ. ಸರ್ಕಾರ ಅನುದಾನ ನೀಡಲಿಲ್ಲ ಎಂದರೆ, ನನಗೆ ಆ ಮೋರಿಗಳನ್ನು ದತ್ತು ನೀಡಲಿ, ನಾನು ಪಾಲಿಕೆ ಅನುದಾನ ಕೇಳದೇ ಶಾಸಕರ ನಿಧಿಯಿಂದ ಅವುಗಳ ಕೆಲಸ ಮಾಡಿಕೊಳ್ಳುತ್ತೇನೆ’ ಎಂದರು.

ಸ್ವಯಂ ಪ್ರೇರಿತವಾಗಿ ನೀವೇ ಈ ಕೆಲಸ ಮಾಡಬಹುದಲ್ಲವೇ ಎಂಬ ಪ್ರಶ್ನೆಗೆ, ‘ಆ ರೀತಿ ನಮ್ಮಷ್ಟಕ್ಕೆ ನಾವು ಶಾಲೆಗಳನ್ನಾಗಲಿ, ಮೋರಿಗಳ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ, ಅದಕ್ಕೆ ಸರ್ಕಾರದ ಅನುಮತಿ ಬೇಕು. ಸರ್ಕಾರ ಶಾಲೆಗಳನ್ನು ದತ್ತುಕೊಟ್ಟಾಗ ಮಾತ್ರ ನಾವು ಅದನ್ನು ಅಭಿವೃದ್ಧಿ ಮಾಡಬಹುದು’ ಎಂದು ಹೇಳಿದರು.

ಅನುದಾನ ಬಿಡುಗಡೆ ಮಾಡದೇ ಇರುವುದರ ಹಿಂದೆ ರಾಜಕೀಯ ಉದ್ದೇಶವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಸರ್ಕಾರ ಬಂದ ನಂತರ ನಮಗೆ ಕಳೆದ ಸರ್ಕಾರಕ್ಕಿಂತ 176 ಕೋಟಿ ಅನುದಾನ ಕಡಿತ ಮಾಡಿದರು. ಕೇವಲ 17 ಕೋಟಿ ಮಾತ್ರ ಕೊಟ್ಟಿದ್ದಾರೆ. ಇದರಿಂದ ಮಡಿವಾಳ ಜಂಕ್ಷನ್ ನಲ್ಲಿ ಒಂದು ಅಂಡರ್ ಪಾಸ್ ಮಾತ್ರ ಆಗುತ್ತದೆ. ನನ್ನ ಮಗಳ ಕ್ಷೇತ್ರ ಜಯನಗರಕ್ಕೆ ಸುಮಾರು 200 ಕೋಟಿ ಅನುದಾನ ಕಡಿಮೆ ಮಾಡಿದರು. ಈಗ ಯಾವುದೇ ಅನುದಾನ ನೀಡಿಲ್ಲ’ ಎಂದರು.

ನಾವು ಪ್ರತಿಯೊಬ್ಬರೂ ಮುಖ್ಯಮಂತ್ರಿಗಳ ಬಳಿ ಹೋಗಿ ಅನುದಾನ ಕೊಡಿ ಎಂದು ಕೇಳಲು ಆಗುತ್ತದೆಯೇ? ಬೆಂಗಳೂರು ಅಭಿವೃದ್ಧಿ ಎಂದರೆ ಬಿಜೆಪಿ ಶಾಸಕರ ಕ್ಷೇತ್ರಗಳ ಅಭಿವೃದ್ಧಿನಾ? ಅದು ಬೆಂಗಳೂರು ಅಭಿವೃದ್ಧಿ ಹೇಗಾಗುತ್ತದೆ? ಮಾತೆತ್ತಿದರೆ ಬಿಜೆಪಿಯವರು ಬೆಂಗಳೂರು ಅಭಿವೃದ್ಧಿ ಎಂದು ಹೇಳುತ್ತಾರೆ. ಬೆಂಗಳೂರಿನಲ್ಲಿ ಒಟ್ಟು 28 ಕ್ಷೇತ್ರಗಳಿದ್ದು, ಆ 28 ಕ್ಷೇತ್ರಗಳು ಅಭಿವೃದ್ಧಿಯಾದರೆ ಮಾತ್ರ ಬೆಂಗಳೂರು ಅಭಿವೃದ್ಧಿಯಾಗುತ್ತದೆ. ನಮ್ಮ ಸರ್ಕಾರದಲ್ಲಿ ನಾವು ಹೆಚ್ಚಿನ ಅನುದಾನ ಪಡೆದರೂ ಎಲ್ಲ ಕ್ಷೇತ್ರಗಳಿಗೆ ಅನುದಾನ ಕೊಡುತ್ತಿದ್ದೆವು. ಇವರಂತೆ ಮಾಡುತ್ತಿರಲಿಲ್ಲ. ಈ ರೀತಿ ಶೂನ್ಯ ಅನುದಾನ ನೀಡುತ್ತಿರಲಿಲ್ಲ.

ಈ ಸರ್ಕಾರ ಬಂದಾಗಿನಿಂದಲೂ ಈ ರೀತಿ ತಾರತಮ್ಯ ನಡೆಯುತ್ತಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘2020-21ನೇ ಸಾಲಿನಲ್ಲಿ 198 ವಾರ್ಡ್ ಗಳಲ್ಲಿ ಯಾವುದೇ ವಾರ್ಡ್ ಗಳಿಗೆ ನಯಾಪೈಸೆ ನೀಡಿಲ್ಲ. ಇನ್ನು 2021-22ನೇ ಸಾಲಿನಲ್ಲಿ ಕೇವಲ 60 ಲಕ್ಷ ಅನುದಾನ ನೀಡಿದ್ದು, ಅದು ಇನ್ನು ಕೋಡ್ ಆಗಿಲ್ಲ. ಅದರಲ್ಲಿ 20 ಲಕ್ಷ ರಸ್ತೆಗುಂಡಿ ಮುಚ್ಚಲು, 20 ಲಕ್ಷ ಕೊಳವೆಬಾವಿ ನಿರ್ವಹಣೆ, 20 ಲಕ್ಷ ಶಿಲ್ಟ್ ಅಂಡ್ ಟ್ರ್ಯಾಕ್ಟರ್ಗೆ ನೀಡಿದ್ದಾರೆ. ಹಾಗಾಗಿ ಎರಡು ವರ್ಷಗಳಲ್ಲಿ ಬಿಬಿಯಿಂದ 198 ಕ್ಷೇತ್ರಗಳಿಗೆ ಶೂನ್ಯ ಅನುದಾನ ಸಿಕ್ಕಿದೆ. ಈ ವರ್ಷ ನಮ್ಮ ಎರಡು ಕ್ಷೇತ್ರಕ್ಕೆ ಶೂನ್ಯ ಅನುದಾನ ಕೊಟ್ಟಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಎಲ್ಲ ಕೆಲಸ ಮುಗಿದಿದ್ದರೆ ಒಂದು ಮಾತು, ಆದರೆ ನಮ್ಮಲ್ಲೂ ಕೆಲಸಗಳು ಬಾಕಿ ಇವೆ’ ಎಂದು ಉತ್ತರಿಸಿದರು.

ಬಿಬಿಎಂಪಿ ಚುನಾವಣೆ ಸಂಬಂಧ ಕೇಳಿದ ಪ್ರಶ್ನೆಗೆ, ‘ಏಪ್ರಿಲ್ ನಲ್ಲಿ ಚುನಾವಣೆ ನಡೆಯಬಹುದು. ಸುಪ್ರೀಂಕೋರ್ಟ್  ಮುಂದೆ ಚುನಾವಣೆಗೆ ಸಿದ್ಧ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ಮೋದಿ ಅವರ ಪಕ್ಷ, ನಾನು ಇನ್ನು ಮುಂದೆ ಬಿಜೆಪಿ ಎಂದು ಹೇಳುವ ಬದಲು ದೇವೇಗೌಡರಂತೆ ಮೋದಿ ಪಕ್ಷದವರು ಎಂದು ಕರೆಯುತ್ತೇನೆ. ನ್ಯಾಯಾಲಯ ಕೂಡ ಚುನಾವಣೆ ಬಹಳ ದಿನ ಮುಂದೂಡಲು ಸಾಧ್ಯವಿಲ್ಲ. ಅವರು ಸಚಿವರ ಜತೆ ಮಾತನಾಡಿ ಚುನಾವಣೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅವರು ಯಾವಾಗ ಬೇಕಾದರೂ ಚುನಾವಣೆ ಮಾಡಲಿ, ನಾವು ಸಿದ್ಧ. ಸ್ಥಳೀಯ ಸಂಸ್ಥೆಚುನಾವಣೆಯಲ್ಲಿ ಕಾಂಗ್ರೆಸ್ ಗೆ ಉತ್ತಮ ಫಲಿತಾಶ ಬಂದಿದ್ದು, ಬಿಬಿಎಂಪಿ ಚುನಾವಣೆಯಲ್ಲಿ ಅವಲ್ಲವಕ್ಕಿಂತ ಉತ್ತಮ ಫಲಿತಾಂಶ ಬರುವ ವಿಶ್ವಾಸವಿದೆ’ ಎಂದರು.

ನಿನ್ನೆ 6 ಸಾವಿರ ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಆ ಅನುದಾನವನ್ನು ಬಿಜೆಪಿ ಶಾಸಕರೇ ತೆಗೆದುಕೊಂಡು ಹೋದರೆ, ಬೆಂಗಳೂರು ಅಭಿವೃದ್ಧಿ ಎಲ್ಲಾಗುತ್ತದೆ? ಇದು ಕಾಲಚಕ್ರ, ಇದು ತಿರುಗತ್ತಲೇ ಇರುತ್ತದೆ. ಒಂದೂವರೆ ವರ್ಷದ ನಂತರ ನಾವು ಅಧಿಕಾರಕ್ಕೆ ಬಂದಾಗ ನಾವು ಅವರಿಗೆ ಇದೇ ರೀತಿ ಮಾಡಬೇಕಾಗುತ್ತದೆ. ನಾವು ಸಾಕಷ್ಟು ಅನುದಾನ ನೀಡುತ್ತಿದ್ದೆವು, ಆದರೆ ಅವರು ಇಷ್ಟು ಮೋಸಗಾರರು ಎಂದು ಭಾವಿಸಿರಲಿಲ್ಲ. ನಮ್ಮಿಂದ ಸಹಾಯ ಪಡೆದವರೇ. ನಾನು ಯಾರ ಬಳಿಯು ಅನುದಾನ ಕೇಳಲು ಹೋಗುವುದಿಲ್ಲ. ನಮ್ಮ ಕ್ಷೇತ್ರದಲ್ಲಿ ಕಾಮಗಾರಿಗೆ ಎಷ್ಟು ಹಣ ಅಗತ್ಯವಿದೆ ಎಂದು ಅಧಿಕಾರಿಗಳೇ ತೀರ್ಮಾನಿಸಿ ಅನುದಾನ ಬಿಡುಗಡೆ ಮಾಡಲಿ, ನಮಗೆ ಹೆಚ್ಚುವರಿ ಅನುದಾನ ಬೇಕಾಗಿಲ್ಲ, ನಾವು ದುಂದು ವೆಚ್ಚ ಮಾಡುವುದಿಲ್ಲ’ ಎಂದರು.

ಚುನಾವಣೆ ಹಿನ್ನೆಲೆಯಲ್ಲಿ ಅನುದಾನ ನೀಡಲಿಲ್ಲವೇ? ಎಂಬ ಪ್ರಶ್ನೆಗೆ, ‘ಕಾಂಗ್ರೆಸ್ ಎಲ್ಲರೂ ಚೆನ್ನಾಗಿರಬೇಕು, 198 ವಾರ್ಡ್, 28 ಕ್ಷೇತ್ರ ಅಭಿವೃದ್ಧಿಯಾಗಬೇಕು ಎಂದು ಭಾವಿಸಿದರೆ, ಬಿಜೆಪಿ ಅವರು ಮಾತ್ರ ಚೆನ್ನಾಗಿದ್ದರೆ ಸಾಕು, ಬೇರೆಯವರು ಏನಾದರೂ ಆಗಲಿ ಎಂದು ಭಾವಿಸುತ್ತಾರೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಮಾಧ್ಯಮ ವಿಭಾಗದ ಸಹಸಂಚಾಲಕರಾದ ರಾಮಚಂದ್ರಪ್ಪ ಅವರು ಹಾಗೂ ಪ್ರಚಾರ ಸಮಿತಿ ಅಧ್ಯಕ್ಷರಾದ ಮನೋಹರ್ ಅವರು ಉಪಸ್ಥಿತರಿದ್ದರು.

Join Whatsapp