ಬೀದರ್: ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು. ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ನೀಡಲು ಎಂ.ಎಸ್.ಪಿ ಯನ್ನು ಕಾನೂನಿನ ಚೌಕಟ್ಟಿಗೆ ತರಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಶ್ರೀ ರಾಮ ಮಾರ್ಕೆಟ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಪರವಾಗಿ ಪ್ರಜಾಧ್ವನಿ -02 ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ನರೇಂದ್ರ ಮೋದಿಯವರು ರೈತರ ಸಾಲ ಮನ್ನಾ ಮಾಡಿಲ್ಲ. ಆದರೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 72000 ಕೋಟಿ ರೂ.ಗಳನ್ನು ಮನ್ನಾ ಮಾಡಿದ್ದಾರೆ . ನಮ್ಮ ಅವಧಿಯಲ್ಲಿ ರಾಜ್ಯ ಸರ್ಕಾರ 50,000 ರೂ.ಗಳ ವರೆಗೆ ಸೊಸೈಟಿಗಳಲ್ಲಿ ಪಡೆದ ಬೆಳೆ ಸಾಲವನ್ನು 27 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿತು. 8165 ಕೋಟಿ ರೂ.ಗಳನ್ನು ಸಾಲ ಮಾಡಿ ಭರಿಸಿತು. ಆದರೆ ನರೇಂದ್ರ ಮೋದಿಯವರು ರೈತರಿಗಾಗಿ ಬೇಡಿಕೆ ಇದ್ದರೂ ಸಾಲ ಮಾಡಿಲ್ಲ. ಆದರೆ ಬಂಡವಾಳಶಾಹಿಗಳು, ಕೈಗಾರಿಕೋದ್ಯಮಿಗಳ 16 ಲಕ್ಷ ಕೋಟಿ ರೂ.ಗಳ ಸಾಲ ಮನ್ನಾ ಮಾಡಿದ್ದಾರೆ. ನರೇಂದ್ರ ಮೋದಿಯವರು ಶ್ರೀಮಂತರ ಪರವಾಗಿ ಇದ್ದಾರೆ ಎಂದರು.
ಶೇ 30% ಇದ್ದ ಕಾಪೋರೇಟ್ ತೆರಿಗೆಯನ್ನು 27% ಗಿಳಿಸಿ, ಅದಾನಿ, ಅಂಬಾನಿಗೆ ಸಹಾಯ ಮಾಡಿದ್ದಾರೆ. ಸಾಮಾನ್ಯ ಜನರ ಪರೋಕ್ಷ ತೆರಿಗೆಯನ್ನು 50% ಗೇರಿಸಿದರು. ಬಡವರು ಮಧ್ಯಮ ವರ್ಗದವರ ತೆರಿಗೆ ಹೆಚ್ಚಿಸಿ, ಶ್ರೀಮಂತರ ತೆರಿಗೆಯನ್ನು ಕಡಿಮೆ ಮಾಡಿದ್ದಾರೆ. ಅದಕ್ಕಾಗಿ ಬಿಜೆಪಿಯನ್ನು ತಿರಸ್ಕರಿಸಬೇಕೆಂದು ಕರೆ ನೀಡಿದರು. ಕಿರಿಯ ವಯಸ್ಸಿನ ಸಾಗರ್ ಖಂಡ್ರೆಯವರನ್ನು ನಮ್ಮ ಅಭ್ಯರ್ಥಿಯಾಗಿಸಿದ್ದು, ಅವರಿಗೆ ನಿಮ್ಮ ಮತವನ್ನು ಹಾಬೇಕು ಎಂದರು.
ನರೇಂದ್ರ ಮೋದಿಯವರು ಅವರು 10 ವರ್ಷಗಳಲ್ಲಿ ನೀಡಿದ್ದ ಯಾವ ಭರವಸೆಗಳನ್ನು ಬಗೆಹರಿಸಿಲ್ಲ. ನಾವು ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 165 ರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದಲ್ಲದೇ 30 ಹೊಸ ಯೋಜನೆಗಳನ್ನು ಜಾರಿ ಮಾಡಿದ್ದೇವೆ. 2023 ರಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ಅನೇಕ ಭರವಸೆ ನೀಡಿ, 82 ಭರವಸೆಗಳನ್ನು ಈಡೇರಿಸಿ 5 ಗ್ಯಾರಂಟಿಗಳನ್ನೂ ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಜಾರಿ ಮಾಡಿದ್ದೇವೆ. 195 ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿ ಪ್ರಯಾಣ ಮಾಡಿ ಅದರ ಮತ್ತ ಉಳಿತಾಯವಾಗಿದೆ. ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹ ಜ್ಯೋತಿ, ಯುವನಿಧಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದರು.
ಬಿಜೆಪಿ, ನರೇಂದ್ರ ಮೋದಿ ನುಡಿದಂತೆ ನಡೆಯದೇ ಸುಳ್ಳು ಹೇಳಿಕೊಂಡು ದೇಶದ ಉದ್ದಗಲಕ್ಕೂ ತಿರುಗುತ್ತಾರೆ. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದರೆ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದರು. 34000 ಕೋಟಿ ರೂ.ಗಳನ್ನು ಕಳೆದ ವರ್ಷ ಹಾಗೂ ಪ್ರಸಕ್ತ ಸಾಲಿನಲ್ಲಿ 52009 ಕೋಟಿ ರೂ.ಗಳನನು ಮೀಸಲಿರಿಸಲಾಗಿದೆ. 1.20 ಲಕ್ಷ ಕೋಟಿ ರೂ.ಗಳನ್ನು ಅಭಿವೃದ್ಧಿಗಾಗಿ ಮೀಸಲಿರಿಸಿದೆ. ಬಿಜೆಪಿಯವರು ಬಜೆಟ್ ನ್ನು ಓದಬೇಕು. ಬಜೆಟ್ ನಲ್ಲಿ 68000 ಸಾವಿರ ಕೋಟಿ ರೂ.ಗಳನ್ನು ಅಭಿವೃದ್ದಿಗೆ ಇಟ್ಟಿದ್ದೇವೆ ಎಂದು ಸಿಎಂ ಹೇಳಿದರು.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಶಾಸಕರಾದ ಬಿ.ಆರ್. ಪಾಟೀಲ್, ಅಜಯ್ ಸಿಂಗ್, ಅಭ್ಯರ್ಥಿ ಸಾಗರ್ ಖಂಡ್ರೆ ಉಪಸ್ಥಿತರಿದ್ದರು.