1947 ಆಗಸ್ಟ್ 15 ಭಾರತವು ಬ್ರಿಟಿಷರ ದಾಸ್ಯತನದಿಂದ ಮುಕ್ತಿ ಹೊಂದಿದ ಮಹತ್ತರ ಗಳಿಗೆಯು ಹಲವು ಮಹೋನ್ನತರ ತ್ಯಾಗ, ಧೀರತೆ ಪರಿಶ್ರಮ, ಬಲಿದಾನಗಳ ಪ್ರತೀಕವಾಗಿದೆಯೆಂದು ಇತಿಹಾಸವು ನಮಗೆ ಕಲಿಸಿ ಕೊಡುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರ ಪಾತ್ರ ಅಪಾರವಾಗಿತ್ತು. ಪುರುಷರಂತೆ ಸ್ತ್ರೀಯರೂ ರಾಷ್ಟ್ರದ ಪ್ರತಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಿರುವುದು ಮುಸ್ಲಿಮ್ ಮಹಿಳೆಯರ ಪಾಲಿಗೆ ಹೆಮ್ಮೆಯ ಸಂಗತಿ. ಇಂತಹ ಧೀರ ಮಹಿಳೆಯರ ಹೆಸರುಗಳನ್ನು ತಡಕಾಡಿದಾಗ ಪ್ರಮುಖ ಸ್ಥಾನದಲ್ಲಿ ಕಾಣಸಿಗುವ ಅತ್ಯಂತ ಪ್ರಶಂಸನೀಯ, ಅನುಕರಣೀಯ ನಾಮವಾಗಿದೆ ಆಬಿದಾ ಬಾನು ಬೇಗಂ. ‘ ಬೀ ಅಮ್ಮ ‘ ಎಂದೇ ಇವರು ಪ್ರಖ್ಯಾತರು.
ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ‘ಅಲಿ ಬ್ರದರ್ಸ್ ‘ ಎಂದು ಖ್ಯಾತರಾದ ಮೌಲಾನಾ ಮಹಮ್ಮದ್ ಅಲಿ ಜೌಹರ್ ಹಾಗೂ ಮೌಲಾನಾ ಶೌಕತ್ ಅಲಿ ಜೌಹರ್ ಎಂಬ ಧೀರ ಮಕ್ಕಳ ತಾಯಿಯಾಗಿದ್ದ ಬೀ ಅಮ್ಮ ಇಂದಿಗೂ ಮುಸ್ಲಿಮ್ ಸಂಪ್ರದಾಯಸ್ತ ಮಹಿಳೆಯರಿಗೆ ಆದರ್ಶಪ್ರಾಯವೆಂದರೆ ತಪ್ಪಾಗಲಾರದು.
ಪ್ರಸ್ತುತ ಭಾರತದಲ್ಲಿ ಅಲ್ಪಸಂಖ್ಯಾತರ ಪಾಲಿಗೆ ಭಾಗಶಃ ನರಕ ಸದೃಶದಂತಿರುವ, ರಾಜಕೀಯ, ಸಾಮಾಜಿಕ, ಆರೋಗ್ಯ ವ್ಯವಸ್ಥೆಯಲ್ಲೂ ಅರಾಜಕತೆ ತಾಂಡವವಾಡುತ್ತಿರುವ ಇಂದಿನ ಯು.ಪಿ.( ಉತ್ತರ ಪ್ರದೇಶ)ಯ ರಾಂಪುರ ಜಿಲ್ಲೆಯಲ್ಲಿ 1857 ರಲ್ಲಿ ಆಬಿದಾ ಬೇಗಂ ಜನನ. ಸಣ್ಣ ವಯಸ್ಸಿನಲ್ಲಿ ವಿಧವೆಯಾದ ಇವರಿಗೆ ಆರು ಮಕ್ಕಳ ತುಂಬು ಸಂಸಾರದ ಜವಾಬ್ದಾರಿ ಹೆಗಲ ಮೇಲಿತ್ತು. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಂ ರ ಜೀವನ ಶೈಲಿಯನ್ನು ಆದರ್ಶವಾಗಿರಿಸಿ ಸರಳ ಆಹಾರ ವಿಧಾನ ಹಾಗು ಸರಳ ವಸ್ತ್ರ ವಿಧಾನದಲ್ಲಿ ಮಕ್ಕಳನ್ನು ಬೆಳೆಸಿದರು.ಆದರೂ ಶಿಕ್ಷಣದ ವಿಚಾರದಲ್ಲಿ ಉನ್ನತಿಯನ್ನೇ ಆಗ್ರಹಿಸಿದರು. ತಾನು ಅನಕ್ಷರಸ್ಥೆಯಾದರೂ ತನ್ನ ಮಕ್ಕಳು ಆಂಗ್ಲ ಮಾಧ್ಯಮದಲ್ಲೇ ಕಲಿಯಬೇಕೆಂದು ಪಟ್ಟು ಹೀಡಿಧರು. ಅದರಂತೆಯೇ ಸಾಧಿಸಿದರು. ಉನ್ನತ ಶಿಕ್ಷಣಕ್ಕೆ ಹಣದ ಕೊರತೆಯುಂಟಾದಾಗ ನೆರೆಮನೆಯ ಸೇವಕಿಯ ಸಹಾಯದಿಂದ ತನ್ನ ಚಿನ್ನವನ್ನು ಮಾರಿದರು. ಗಂಡಿನ ಆಸರೆ ಇಲ್ಲದ ವಿಷಮ ಪರಿಸ್ಥಿತಿಯಲ್ಲೂ ಶಿಕ್ಷಣಕ್ಕೆ ಒತ್ತು ನೀಡಿದ ಬೀ ಅಮ್ಮ ಕೇವಲ ಫ್ಯಾಷನ್ ಮೊರೆ ಹೋಗುವ ಆಧುನಿಕ ತಾಯಂದಿರಿಗೆ ಮಾದರಿಯಾಗಬೇಕಿದೆ.
ಬ್ರಿಟಿಷರ ಕಪಿಮುಷ್ಟಿಯಿಂದ ಮುಕ್ತವಾದ ಭಾರತವನ್ನು ನೋಡುವ ಬಲವಾದ ಆಸೆ ಬೀ ಅಮ್ಮ ರವರ ಮನದಲ್ಲಿ ಬೇರೂರಿತ್ತು. ಅದಕ್ಕಾಗಿ ಖಿಲಾಫತ್ ಚಳುವಳಿಯಲ್ಲಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡರು. ತನ್ಮೂಲಕ ಮಕ್ಕಳನ್ನು ಪ್ರಚೋದಿಸಿ ಅವರನ್ನು ಸ್ವಾತಂತ್ರ್ಯ ಹೋರಾಟಗಾರರನ್ನಾಗಿ ಮಾಡಿ ಘನತೆಯಿಂದ ಜೀವಿಸಿದರು.
ಒಮ್ಮೆ ಬಂಧನಕ್ಕೊಳಗಾದ ಮಹಮ್ಮದ್ ಅಲಿಯವರು ಬ್ರಿಟಿಷರಿಂದ ಕ್ಷಮಾದಾನ ಕೋರಿದರೆಂಬ ವದಂತಿ ಹಬ್ಬಿತ್ತು. ಈ ಸಂದರ್ಭದಲ್ಲಿ ಬೀ ಅಮ್ಮ “ತನ್ನ ಮಗ ಬ್ರಿಟಿಷರಿಂದ ಕ್ಷಮೆ ಯಾಚಿಸುವ ಬಗ್ಗೆ ಆಲೋಚಿಸಲೂ ಸಾಧ್ಯವಿಲ್ಲ. ಒಂದು ವೇಳೆ ಆತ ಹಾಗೆ ಮಾಡಿದರೆ ನಾನೇ ಅವನ ಕತ್ತು ಹಿಸುಕಿ ಸಾಯಿಸುವೆ.” ಎಂದು ಉದ್ಗರಿಸಿದ್ದರು. ಶತಮಾನದ ಹಿಂದೆಯೇ ಒಬ್ಬ ಅನಕ್ಷರಸ್ಥ ಮಹಿಳೆ ಇಂತಹ ಧೀರತೆಯನ್ನು ಪ್ರದರ್ಶಿಸಿದ್ದರೆ ಆಕೆಯ ದೇಶ ಪ್ರೇಮವನ್ನು ಅಳೆದು ತೂಗಲು ಸಾಧ್ಯವಿಲ್ಲ. ಆಕೆಯು ಪ್ರತಿನಿಧಿಸಿದ ಅದೇ ಧರ್ಮದ ಅನುಯಾಯಿಗಳು ಇಂದು ತಮ್ಮ ದೇಶಪ್ರೇಮದ ಬಗೆಗೆ ಪ್ರಶ್ನಿಸಲ್ಪಡುತ್ತಿರುವುದು ವಿಪರ್ಯಾಸವೇ ಸರಿ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರ ಬೆಂಬಲ ಪಡೆಯುವ ಬಗ್ಗೆ ಒಮ್ಮೆ ಗಾಂಧೀಜಿಯವರು ಆಬಿದಾ ಬೇಗಂ ರೊಂದಿಗೆ ಚರ್ಚಿಸಿದ್ದರು. ಗಾಂಧೀಜಿಯ ಮಾತುಗಳನ್ನು ಪರಿಗಣಿಸಿ ತನ್ನ ಜೊತೆ ಹೋರಾಟಗಳಲ್ಲಿ ಸಕ್ರಿಯರಾಗುವಂತೆ ಪ್ರೋತ್ಸಾಹಿದರು. ಹೋರಾಟಗಾರರಿಗೆ ನೆರವಾಗಲು ನಿಧಿ ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅನೇಕ ಮಹಿಳಾ ಸಂಘಟನೆಗಳಿಗೆ ಮಾರ್ಗದರ್ಶಿಯಾಗಿ ಕಾರ್ಯ ನಿರ್ವಹಿಸಿದರು. ವಿದೇಶೀ ಸರಕುಗಳನ್ನು ತ್ಯಜಿಸುವ ಪ್ರಾಮುಖ್ಯತೆಯನ್ನು ಜನರಿಗೆ ಮನದಟ್ಟು ಮಾಡುತ್ತಿದ್ದರು. ಒಮ್ಮೆ ಅವರು ಜನರನ್ನು ಉದ್ದೇಶಿಸಿ ಹೀಗೆ ಹೇಳಿದರು.” ದೇಶವಾಸಿಗಳೇ ವಿದೇಶೀ ಜೀವನ ಮಾರ್ಗವನ್ನು ಬಿಟ್ಟು ಬಿಡಿ. ನಿಮ್ಮ ಪೂರ್ವಜರ ಜೀವನ ವಿಧಾನಕ್ಕೆ ಅಂಟಿಕೊಳ್ಳಿ. ವಿದೇಶಿಗರ ಸೇವೆ ಮಾಡಬೇಡಿರಿ. ಅವರ ಗೌರವಗಳನ್ನು ಸ್ವೀಕರಿಸಬೇಡಿ. ಕಾರಣ ಅವರು ವಂಚಕರು ಹಾಗು ಮೋಸಗಾರರು.”ಭಾರತದ ನಾಯಿ ಬೆಕ್ಕುಗಳು ಕೂಡ ಬ್ರಿಟಿಷರ ಅಡಿಯಾಳುಗಳಾಗಿ ಇರಬಾರದೆಂಬ ಧ್ಯೇಯ ಅವರದಾಗಿತ್ತು. 1917 ರಲ್ಲಿ ಮೊದಲ ಬಾರಿಗೆ ರಾಜಕೀಯ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಓರ್ವ ಬುರ್ಖಾದಾರಿ ಮಹಿಳೆ ಪ್ರಪ್ರಥಮವಾಗಿ ಮಾಡಿದ ಭಾಷಣವಾಗಿತ್ತು ಅದು. ಕಟ್ಟುನಿಟ್ಟಿನ ಪರ್ದಾವನ್ನು ಅಭ್ಯಾಸ ಮಾಡಿಕೊಂಡಿದ್ದರೂ ರಾಷ್ಟ್ರವಾದಿ ಚಳುವಳಿಗಳು ತೀವ್ರವಾದಾಗ, ತನ್ನ ಮಕ್ಕಳ ಬಂಧನವಾದಾಗ ಅನಿವಾರ್ಯವಾಗಿ ತಾನು ಹೇರಿಕೊಂಡಿದ್ದ ನಿರ್ಬಂಧಗಳನ್ನು ಸಡಿಲಗೊಳಿಸಿದರು. ತನ್ನ ಮಕ್ಕಳಲ್ಲಿ ಹೋರಾಟದ ಕಿಚ್ಚು ಹೊತ್ತಿಸಿದ್ದ ಬೀ ಅಮ್ಮ ಒಮ್ಮೆ ಮಹಮ್ಮದ್ ಅಲಿ ಅವರೊಂದಿಗೆ ಈ ರೀತಿ ಹೇಳುತ್ತಾರೆ ” ಮಗನೇ ಖಿಲಾಫತ್ ಸಲುವಾಗಿ ನೀನು ನಿನ್ನ ಪ್ರಾಣವನ್ನೇ ಮುಡಿಪಾಗಿಡು.” ಸ್ವಾತಂತ್ರ್ಯ ಸಂಗ್ರಾಮಗಳು ಮುಂದುವರಿದಂತೆ ಅವರ ಈ ಮಾತುಗಳು ಭಾರತದಾದ್ಯಂತ ಮರುಕಳಿಸುತಿತ್ತು.
ಸದಾ ಸಮಯ ಹಿಂದೂ ಮುಸ್ಲಿಮ್ ಐಕ್ಯರಾಗಬೇಕೆಂದು ಬಯಸುತ್ತಿದ್ದ ಆಬಿದಾ ಬೇಗಂ ಎರಡು ಸಮುದಾಯಗಳ ನಡುವಿನ ಸ್ನೇಹ ಸೇತುವಾಗಿ ಪರಿಶ್ರಮಿಸಿದರು. ಹಿಂದೂ ಮುಸ್ಲಿಮ್ ಭಾರತದ ಎರಡು ಕಣ್ಣುಗಳೆಂದು ವಿಶ್ಲೇಷಿಸುತ್ತಿದ್ದರು. ಸ್ವಾತಂತ್ರ್ಯ ಗೆಲ್ಲಲು ಕೋಮು ಸೌಹಾರ್ದತೆ ಕಡ್ಡಾಯವೆಂದು ಹೇಳುತ್ತಿದ್ದರು. ಒಗ್ಗಟ್ಟು ಮತ್ತು ಬಹುತ್ವದ ಪರಂಪರೆಯನ್ನು ಜಗತ್ತಿಗೆ ಸಾರಿದರು.
ಧರ್ಮದ ಹೆಸರಿನಲ್ಲಿ ವಿಕ್ರತಿ ಮೆರೆಯುತ್ತಿರುವ ಹಲವು ಘಟನೆಗಳು ಪ್ರತಿನಿತ್ಯ ಕಂಡುಬರುತ್ತಿದ್ದರೂ ನಾವು ಮೂಕಪ್ರೇಕ್ಷಕರಾಗಿದ್ದೇವೆ. ಮ್ರಗಗಳೇ ನಾಚುವಂತಹ ಮೃಗೀಯತೆಯು ದೇಶದಲ್ಲಿ ತಾಂಡವವಾಡುತ್ತಿದೆ. ಪ್ರಾಣಿಗಳಿಗಿರುವ ಕನಿಷ್ಟ ಬೆಲೆಯೂ ಮನುಷ್ಯ ಜೀವಕ್ಕೆ ಇಲ್ಲವಾಗಿದೆ. ನಿಂತಲ್ಲಿ ಕೂತಲ್ಲಿ ಕೋಮು ವಿಷ ಬೀಜ ಬಿತ್ತಿ ದೇಶದ ಸೌಹಾರ್ದತೆಗೆ, ಐಕ್ಯತೆಗೆ ಧಕ್ಕೆ ತರಲು ಫ್ಯಾಶಿಸ್ಟ್ ಶಕ್ತಿಗಳು ಯತ್ನಿಸುತ್ತಲೇ ಇವೆ. ಪ್ರಸ್ತುತ ಸನ್ನಿವೇಶದಲ್ಲಿ ಬೀ ಅಮ್ಮರ ಆದರ್ಶಗಳು ನೆಲೆ ನಿಲ್ಲಲು ಆ ಮೂಲಕ ಭಾರತದ ಭವ್ಯ ಪರಂಪರೆಯನ್ನು ಎತ್ತಿ ಹಿಡಿಯಲು ದೇಶದ ಪ್ರಜ್ಞಾವಂತ ನಾಗರಿಕರು ಸನ್ನದ್ಧರಾಗುವುದು ಅತೀ ಅನಿವಾರ್ಯವಾಗಿದೆ.
ಪದ್ಮಭೂಷಣ ಪ್ರಶಸ್ತಿ ವಿಜೇತ ಭಾರತದ ಖ್ಯಾತ ಪತ್ರಕರ್ತರಾಗಿದ್ದ ಕುಲದೀಪ್ ನಯ್ಯರ್ ಅವರು ಬೀ ಅಮ್ಮ ರನ್ನು ಪರಾಮರ್ಶಿಸಿದ್ದು ಹೀಗೆ ” ನಮ್ಮ ಶಿಕ್ಷಣ ಪದ್ಧತಿಯಲ್ಲಿ ಬೀ ಅಮ್ಮರ ಕೊಡುಗೆಗಳನ್ನು ನಿರ್ಲಕ್ಷಿಸುತ್ತಿರುವುದು ನೋವಿನ ಸಂಗತಿ. ಶಾಲೆ ಮತ್ತು ಕಾಲೇಜುಗಳಲ್ಲಿ ಬೀ ಅಮ್ಮರ ಬಗೆಗಿನ ಪುಸ್ತಕ ಬರೆದು ಕಲಿಸುವುದು ಈ ಸಮಯದ ಅವಶ್ಯಕತೆಯಾಗಿದೆ. ಖಿಲಾಫತ್ ಚಳುವಳಿಯ ಸಂದರ್ಭದಲ್ಲಿ ಲಾಹೋರ್ ನಲ್ಲಿ ಮಾಡಿದ ಪ್ರಭಾಷಣವು ಬಹುತ್ವದ ಬಗೆಗಿನ ಅವರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಅವರು ಬಳಸಿದ ಭಾಷೆಯು ಒಂದು ತುಣುಕು ಸಾಹಿತ್ಯಕ್ಕಿಂತ ಕಡಿಮೆಯೇನಲ್ಲ.” ನಯ್ಯರ್ ರಂತಹ ಮಹನೀಯರಿಂದಲೂ ಸೈ ಎನಿಸಿಕೊಂಡ ಬೀ ಅಮ್ಮರ ಬದುಕು ನವ ತಲೆಮಾರಿಗೆ ಉತ್ತಮ ಮಾರ್ಗದರ್ಶಿ.
‘ದೇಶ ಪ್ರೇಮವು ಈಮಾನಿನ ಭಾಗವೆಂದು ‘ ಸಾರಿದ ಇಸ್ಲಾಮಿನ ಪ್ರತಿನಿಧಿಯಾಗಿ, ಸಂಪ್ರದಾಯಸ್ಥ ಕುಟುಂಬದ ಓರ್ವ ಸಾಮಾನ್ಯ ಗ್ರಹಿಣಿಯಾಗಿ ದೇಶದ ಪ್ರತಿ ಪ್ರಬುದ್ಧತೆಯನ್ನು ಮೆರೆದ ರೀತಿ ಅಸಾಮಾನ್ಯವೇ ಸರಿ. ” “ಹೇಳಿಕೊಳ್ಳಲು ಮಾತ್ರ ಅವಿದ್ಯಾವಂತೆಯಾಗಿದ್ದ ನನ್ನ ತಾಯಿಯಂತೆ ಧೈವ ಭಕ್ತಿಯುಳ್ಳ ,ಧಾರ್ಮಿಕ ನಿಷ್ಟೆಯಳ್ಳ ಮತ್ತೊಬ್ಬರನ್ನು ನಾನು ಕಂಡಿಲ್ಲ .” ಎಂಬ ಮಹಮ್ಮದ್ ಅಲಿ ಯವರ ಮಾತುಗಳನ್ನು ಸಾಂದರ್ಭಿಕವಾಗಿ ಸ್ಮರಿಸಲೇಬೇಕು. ವಯಸ್ಸು, ಆರೋಗ್ಯವನ್ನು ಪರಿಗಣಿಸದೆ ಹೋರಾಟಗಾರ್ತಿಯಾಗಿ ಬಾಳು ಸವೆಸಿ 1924 ನವೆಂಬರ್ 13 ರಂದು ಪರಲೋಕ ಯಾತ್ರೆಗೈದ ಬೀ ಅಮ್ಮ ಇತಿಹಾಸದ ಪುಟಗಳಲ್ಲಿ ಇಂದಿಗೂ ಅಜರಾಮರರು.