ಆಂಟಿಗುವಾ: ಅಂಡರ್ -19 ವಿಶ್ವಕಪ್ ಟೂರ್ನಿಯಲ್ಲಿ ಯಂಗ್ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಿದೆ. ಶನಿವಾರ ರಾತ್ರಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ, ಬಾಂಗ್ಲಾದೇಶ ತಂಡವನ್ನು ಐದು ವಿಕೆಟ್’ಗಳ ಅಂತರದಲ್ಲಿ ಸುಲಭವಾಗಿ ಮಣಿಸಿದೆ.
ಬುಧವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ, ಬಲಿಷ್ಠ ಆಸ್ಟ್ರೇಲಿಯಾ ತಂಡದ ಸವಾಲನ್ನು ಎದುರಿಸಲಿದೆ. ಕ್ವಾರ್ಟರ್ ಫೈನಲ್’ನಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ ಆಸ್ಟ್ರೇಲಿಯಾ ಸೆಮಿ ಹಂತಕ್ಕೆ ತೇರ್ಗಡೆಯಾಗಿತ್ತು.
ಆಂಟಿಗುವಾದ ಕೂಲಿಡ್ಜ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ, ಬಾಂಗ್ಲಾದೇಶಕ್ಕೆ ಬ್ಯಾಟಿಂಗ್ ಬಿಟ್ಟುಕೊಟ್ಟಿತ್ತು. ಆದರೆ ಭಾರತದ ಬಿಗು ಬೌಲಿಂಗ್ ದಾಳಿಯೆದುರು ರನ್ ಗಳಿಸಲು ಒದ್ದಾಡಿದ ಬಾಂಗ್ಲಾ, 37.1 ಓವರ್ಗಳಲ್ಲಿ ಕೇವಲ 111 ರನ್’ಗಳಿಸುವಷ್ಟರಲ್ಲೇ ಆಲೌಟ್ ಆಯಿತು.
ಸುಲಭ ಗುರಿ ಬೆನ್ನಟ್ಟಿದ ಭಾರತ, ಅಂಗ್’ಕ್ರಿಶ್ ರಘುವಂಶಿ [44] ಹಾಗೂ ಉಪನಾಯಕ ಶೇಖ್ ರಶೀದ್ [26] 3ನೇ ವಿಕೆಟ್ ಜೊತೆಯಾಟದಲ್ಲಿ 70 ರನ್ ಗಳಿಸುವ ಮೂಲಕ ಭಾರತದ ಗೆಲುವನ್ನು ಖಾತ್ರಿಪಡಿಸಿದರು.
ಅಂತಿಮವಾಗಿ ಭಾರತ 30.5 ಓವರ್ಗಳಲ್ಲಿ ಐದು ವಿಕೆಟ್ ನಷ್ಟದಲ್ಲಿ 117 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.
ಬಾಂಗ್ಲಾದೇಶದ ನಾಯಕ ರಖೀಬುಲ್ ಹಸನ್ ಬೌಲಿಂಗ್’ನಲ್ಲಿ ಆಕರ್ಷಕ ಸಿಕ್ಸರ್ ಬಾರಿಸುವ ಮೂಲಕ ಕೌಶಲ್ ತಾಂಬೆ, ಭಾರತದ ಗೆಲುವಿನ ಔಪಚಾರಿಕತೆಯನ್ನು ಪೂರ್ತಿಗೊಳಿಸಿದರು.
ಭಾರತದ ಪರ ರವಿಕುಮಾರ್ ಮೂರು ವಿಕೆಟ್ ಹಾಗೂ ವಿಕ್ಕಿ ಓಸ್ಟಾಲ್ ಎರಡು ವಿಕೆಟ್ ಪಡೆದರೆ, ಬಾಂಗ್ಲಾದೇಶ ಪರ ರಿಪಾನ್ ಮೊಂಡಲ್ ನಾಲ್ಕು ವಿಕೆಟ್ ಪಡೆದರು.