ICC T-20 ವಿಶ್ವಕಪ್: ಸರಣಿ ರದ್ದು ಮಾಡಿದ ನ್ಯೂಝಿಲ್ಯಾಂಡ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಪಾಕಿಸ್ತಾನ..?

Prasthutha|

ಶಾರ್ಜಾ : ಬದ್ಧ ವೈರಿ ಭಾರತದ ವಿರುದ್ಧ ಭರ್ಜರಿ ಜಯ ಸಾಧಿಸಿದ ಆತ್ಮವಿಶ್ವಾಸದಲ್ಲಿರುವ ಪಾಕಿಸ್ತಾನ ತಂಡ, ಮಂಗಳವಾರ ನಡೆಯಲಿರುವ ತನ್ನ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಸವಾಲನ್ನು ಎದುರಿಸಲಿದೆ.

- Advertisement -


ವಿಶ್ವಕಪ್ ಟೂರ್ನಿಗೂ ಮುನ್ನ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ನ್ಯೂಜಿಲೆಂಡ್ ತಂಡ, ಭದ್ರತಾ ಭೀತಿಯ ಕಾರಣ ನೀಡಿ ಯಾವುದೇ ಪಂದ್ಯವನ್ನು ಆಡದೆ ತವರಿಗೆ ಮರಳಿತ್ತು. ಇದರ ಬೆನ್ನಲ್ಲೇ ಇಂಗ್ಲೆಂಡ್ ತಂಡವು ಪಾಕಿಸ್ತಾನ ಪ್ರವಾಸದಿಂದ ಹಿಂದೆ ಸರಿದಿತ್ತು. ಇದರಿಂದ ಪಾಕಿಸ್ತಾನ ತೀವ್ರ ಮುಜುಗರಕ್ಕೆ ಒಳಗಾಗಿತ್ತು. ಅಲ್ಲದೆ ವಿಶ್ವಕಪ್ ತಯಾರಿ ದೃಷ್ಟಿಯಿಂದ ಪಾಕಿಸ್ತಾನ ತಂಡಕ್ಕೆ ಹಿನ್ನಡೆಯೂ ಆಗಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ತನಗಾಗಿರುವ ಅವಮಾನಕ್ಕೆ ಬಾಬರ್ ಅಜಮ್ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.


ಶಾರ್ಜಾದಲ್ಲಿ ಮಂಗಳವಾರ ಸಂಜೆ ನಡೆಯುವ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ ಸೆಮಿಫೈನಲ್ ಹಾದಿ ಸುಗಮವಾಗಲಿದೆ. ಆದರೆ ಎರಡು ಅಭ್ಯಾಸ ಪಂದ್ಯಗಳಲ್ಲಿ ಎರಡರಲ್ಲೂ ಸೋಲು ಅನುಭವಿಸಿರುವ ಕೀವಿಸ್’ಗೆ ಇಂದಿನ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಫಿಟ್ನೆಸ್ ಸಮಸ್ಯೆಯಿಂದ ನಾಯಕ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಮಾಡಿರಲಿಲ್ಲ. ಇದು ಕೀವಿಸ್ ಪಾಳಯದಲ್ಲಿ ಚಿಂತೆಯುಂಟುಮಾಡಿದೆ. ಟ್ರೆಂಟ್ ಬೌಲ್ಟ್, ಟಿಮ್ ಸೌಥಿ ಹಾಗೂ ಫರ್ಗ್ಯೂಸನ್’ರನ್ನು ಒಳಗೊಂಡ ಬಲಿಷ್ಠ ಬೌಲಿಂಗ್ ಪಡೆಯನ್ನು ನ್ಯೂಜಿಲೆಂಡ್ ಹೊಂದಿದೆ.

- Advertisement -


ಇನ್ನು ಮೊದಲ ಪಂದ್ಯದಲ್ಲಿ ಅಮೋಘ ಜಯ ಸಾಧಿಸಿದ ಹುಮ್ಮಸ್ಸಿನಲ್ಲಿರುವ ಪಾಕಿಸ್ತಾನ ತಂಡ ಇಂದಿನ ಪಂದ್ಯದಲ್ಲೂ ಸುಲಭ ಜಯದ ಲೆಕ್ಕಾಚಾರದಲ್ಲಿದೆ. ಭಾರತದ ವಿರುದ್ಧ ಶಿಸ್ತಿನ ಬೌಲಿಂಗ್ ದಾಳಿ ಸಂಘಟಿಸಿದ್ದ ಪಾಕಿಸ್ತಾನ ಬೌಲರ್’ಗಳು ಅದೇ ಪ್ರದರ್ಶನವನ್ನು ಕಿವೀಸ್ ವಿರುದ್ಧವೂ ಮುಂದುವರಿಸುವ ಲೆಕ್ಕಾಚಾರದಲ್ಲಿದ್ದಾರೆ. ಪಾಕ್ ಬ್ಯಾಟಿಂಗ್ ವಿಭಾಗವೂ ಬಲಿಷ್ಠವಾಗಿದ್ದು, ಟೀಮ್ ಇಂಡಿಯಾದ ವಿರುದ್ಧದ ಪಂದ್ಯದಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ಜಯದ ಹಾದಿಗೆ ಸಾಗಿದ್ದು ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.


ಪಂದ್ಯ ಆರಂಭ: ಸಂಜೆ 7.30ಕ್ಕೆ
ಸ್ಥಳ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂ



Join Whatsapp