ದುಬೈ: 2028ಕ್ಕೆ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಟಿ20 ಮಾದರಿಯ ಕ್ರಿಕೆಟ್ ಸೇರ್ಪಡೆಗೊಳಿಸುವ ವಿಶ್ವಾಸವಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸಿಇಒ ಜಿಯೋಫ್ ಅಲ್ಲಾರ್ಡಿಸ್ ತಿಳಿಸಿದ್ದಾರೆ.
ಯುಎಸ್‌ನ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಕ್ರಿಕೆಟ್ ಸೇರ್ಪಡೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಕ್ರಿಕೆಟ್‌ನ ವ್ಯಾಪ್ತಿಯನ್ನು ವಿಸ್ತರಿಸಲು ಜಾಗತಿಕ ವೇದಿಕೆ ಬಳಸಿಕೊಳ್ಳಲಾಗುತ್ತಿದ್ದು, ಟಿ20 ಮಾದರಿಯ ಸೇರ್ಪಡೆ ಮಾಡುವ ಪ್ರಸ್ತಾವನೆ ಸಲ್ಲಿಸಿದ್ದೇವೆ. 2028ರ ಒಲಿಂಪಿಕ್ ಕೂಟದಲ್ಲಿ ಕ್ರಿಕೆಟ್‌ಗೆ ಅವಕಾಶ ಸಿಗುವ ಸಾಧ್ಯತೆಗಳಿವೆ. ಐಸಿಸಿ ಪ್ರಯತ್ನಗಳು ಯಶಸ್ವಿಯಾದರೆ 2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಯಾಗುವ ಮೂಲಕ ಮಹತ್ವದ ಮೈಲುಗಲ್ಲು ಸಾಧಿಸಲಿದೆ ಎಂದು ಹೇಳಿದರು.
ಬಿಸಿಸಿಐ ಸಹ ಕಳೆದ ಕೆಲ ವರ್ಷಗಳಿಂದ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೊಳಿಸಲು ಒತ್ತಾಯಿಸುತ್ತಿದೆ. ಅದಕ್ಕಾಗಿಯೇ ಈ ಬಾರಿ ಮೊಟ್ಟ ಮೊದಲಬಾರಿಗೆ ಏಷ್ಯನ್ ಗೇಮ್ಸ್‌ನಲ್ಲೂ ಪಾಲ್ಗೊಳ್ಳಲು ಅನುಮತಿ ನೀಡಿದೆ.