ಐಎಎಸ್ ಅಧಿಕಾರಿಗಳು ಕೇಂದ್ರ ಸರ್ಕಾರದ ವರ್ತನೆಯಿಂದ ಬೇಸತ್ತು ರಾಜ್ಯದಲ್ಲೇ ಉಳಿಯಲು ಬಯಸುತ್ತಿದ್ದಾರೆ: ಸಸಿಕಾಂತ್ ಸೆಂಥಿಲ್

Prasthutha|

ಚೆನ್ನೈ: ಐಎಎಸ್ ಕೇಡರ್ ನಿಯಮಗಳು 1954ನ್ನು ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಹೊರಟಿರುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ಜಟಾಪಟಿಗೆ ಕಾರಣವಾಗಿದೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಕೇಂದ್ರದ ನಿರ್ಧಾರವನ್ನು ವಿರೋಧಿಸಿದ್ದಾರೆ.

- Advertisement -

“ಕೇಂದ್ರ ಸರ್ಕಾರ ಮಾಡಲು ಹೊರಟಿರುವ ತಿದ್ದುಪಡಿಗಳು ಒಕ್ಕೂಟ ಸಹಕಾರ ತತ್ವಕ್ಕೆ ವಿರುದ್ಧವಾಗಿದೆ” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿರುವ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರವು ಒಕ್ಕೂಟ ವ್ಯವಸ್ಥೆಯನ್ನು ನಿರ್ಲಕ್ಷಿಸುತ್ತಿದೆ ಎಂದಿದ್ದಾರೆ. ಕೇಂದ್ರ ಸರ್ಕಾರದ ಸಚಿವಾಲಯಗಳಲ್ಲಿ ಜಂಟಿ ಕಾರ್ಯದರ್ಶಿ ದರ್ಜೆಯ ಅಧಿಕಾರಿಗಳ ಸಂಖ್ಯೆ ಇಳಿಕೆಯಾಗುತ್ತಿದೆ. 2011ರಲ್ಲಿ 309 ಇದ್ದ ಅಧಿಕಾರಿಗಳ ಸಂಖ್ಯೆ ಈಗ 223 ಆಗಿದೆ. 2011ರಲ್ಲಿ ಶೇ. 25ರಷ್ಟು ಇದ್ದ ಕೇಂದ್ರೀಯ ನಿಯೋಜನೆ ಈಗ ಶೇ. 18ಕ್ಕೆ ಕುಸಿದಿದೆ. ಮಂಜೂರಾದ ಹುದ್ದೆಗಳಲ್ಲಿ ಒಂದಿಷ್ಟು ಮಂದಿಯನ್ನು ‘ಕೇಂದ್ರೀಯ ನಿಯೋಜನೆ ಮೀಸಲು’ (ಸಿಡಿಆರ್) ಅನ್ವಯ ಕೇಂದ್ರ ಸೇವೆಗೆ ಕಳುಹಿಸಬೇಕಿದ್ದು, ಬಹುತೇಕ ರಾಜ್ಯಗಳು ಸಿ.ಡಿ.ಆರ್ ಪಾಲಿಸುತ್ತಿಲ್ಲ ಎಂಬ ಆರೋಪದಡಿಯಲ್ಲಿ ಐಎಎಸ್ (ಕೇಡರ್) ನಿಯಮಗಳು- 1954ರ ನಿಯಮ 6 (1)ಕ್ಕೆ ಹೆಚ್ಚುವರಿ ಅಂಶಗಳನ್ನು ಸೇರಿಸಿ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ನಿಗದಿಪಡಿಸಿದ ಕಾಲಮಿತಿಯಲ್ಲಿ ಕೇಂದ್ರದ ನಿಯಮವನ್ನು ರಾಜ್ಯ ಸರ್ಕಾರ ಜಾರಿಗೊಳಿಸುವಂತೆ ನಿಯಮ ರೂಪಿಸಲಾಗುತ್ತಿದೆ.

- Advertisement -

“ಕೇಂದ್ರದಲ್ಲಿ ಕೆಲಸ ಮಾಡುವ ಐಎಎಸ್ ಅಧಿಕಾರಿಗಳ ಪ್ರಮಾಣ ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಈ ಸಮಸ್ಯೆಗೆ ಕಾರಣವೇನೆಂದರೆ, ಐಎಎಸ್ ಅಧಿಕಾರಿಗಳು ಕೇಂದ್ರ ಸರ್ಕಾರದ ವರ್ತನೆಯಿಂದ ಬೇಸತ್ತು ರಾಜ್ಯದಲ್ಲೇ ಉಳಿಯಲು ಬಯಸುತ್ತಿದ್ದಾರೆ. ಯಾವುದೇ ಸಚಿವಾಲಯದಲ್ಲೂ ತಮ್ಮ ಅಭಿಪ್ರಾಯವನ್ನು ಹೇಳಲು ಐಎಎಸ್ ಗಳಿಗೆ ಸಾಧ್ಯವಾಗುತ್ತಿಲ್ಲ. ಸಚಿವರ ಅಭಿಪ್ರಾಯಗಳನ್ನು ಪ್ರಧಾನಿಯವರೂ ಆಲಿಸುವುದಿಲ್ಲ. ಎಲ್ಲವೂ ಪ್ರಧಾನಿ ಕೇಂದ್ರಿತವಾಗಿ ನಡೆಯುತ್ತಿವೆ. ಪ್ರಧಾನಿ ಹೇಳಿದಂತೆ ಕಡತಗಳನ್ನು ಮಾಡಬೇಕಾಗಿದೆ. ಅಧಿಕಾರಿಗಳು ಭಯದ ವಾತಾವರಣದಲ್ಲೇ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡುವುದು ಪ್ರತಿಯೊಬ್ಬ ಐಎಎಸ್ ಅಧಿಕಾರಿಗೂ ಹೆಮ್ಮೆಯ ವಿಷಯ. ಆದರೆ ಏನಾದರೂ ಒಂದು ಸಣ್ಣ ಎಡವಟ್ಟಾದರೆ ಅಧಿಕಾರಿಯು ತನ್ನ ವೃತ್ತಿಬದುಕನ್ನೇ ಕಳೆದುಕೊಳ್ಳಬೇಕಾಗುತ್ತದೆ. ಇಂತಹ ಕಷ್ಟವನ್ನು ಏಕೆ ಮೈಮೇಲೆ ಎಳೆದುಕೊಳ್ಳಬೇಕು ಎಂದು ಐಎಎಸ್ ಅಧಿಕಾರಿಗಳು ಭಾವಿಸುತ್ತಾರೆ”ಎಂದು ಸೆಂಥಿಲ್ ವ್ಯಾಖ್ಯಾನಿಸಿದ್ದಾರೆ.

ಹೊಸ ತಿದ್ದುಪಡಿಗಳಿಂದಾಗುವ ಸಮಸ್ಯೆಗಳೇನೆಂದರೆ“ರಾಜ್ಯದಲ್ಲಿ ಒಂದು ಮುಖ್ಯವಾದ ಕೆಲಸದಲ್ಲಿ ತೊಡಗಿಸಿಕೊಂಡಿರುವ ಐಎಎಸ್ ಅಧಿಕಾರಿಯನ್ನು ಯಾವುದೇ ಮುನ್ಸೂಚನೆ ನೀಡದೆ ಕೆಲಸದಿಂದ ತೆಗೆದು ಕೇಂದ್ರಕ್ಕೆ ಕರೆಸಿಕೊಳ್ಳುವ ಅವಕಾಶವಿದೆ. ರಾಜ್ಯದಲ್ಲಿ ಕೇಂದ್ರಕ್ಕೆ ವಿರೋಧಿಯಾಗಿರುವ ಪಕ್ಷ ಅಧಿಕಾರದಲ್ಲಿದ್ದಾಗ ರಾಜ್ಯ ಸರ್ಕಾರಕ್ಕೆ ಕಿರುಕುಳ ನೀಡಲೆಂದೇ ಕೆಲವು ಮುಖ್ಯವಾದ ಅಧಿಕಾರಿಗಳನ್ನು ಕೇಂದ್ರ ಕರೆಸಿಕೊಳ್ಳುವ ಅವಕಾಶ ಈ ತಿದ್ದುಪಡಿ ನಿಯಮಗಳಲ್ಲಿದೆ. ಕೇಂದ್ರ ಸರ್ಕಾರಕ್ಕೆ ಈ ರೀತಿಯ ಅಧಿಕಾರವು ದೊರೆತರೆ, ನಮ್ಮನ್ನು ರಾಜ್ಯದಿಂದ ತೆಗೆದು ಕೇಂದ್ರಕ್ಕೆ ಕರೆಸಿಕೊಂಡು ಹಿಂಸೆ ಕೊಡುತ್ತಾರೋ ಎಂಬ ಭಯದಲ್ಲೇ ಐಎಎಸ್ ಅಧಿಕಾರಿಗಳು ಕೆಲಸ ಮಾಡಬೇಕಾಗುತ್ತದೆ”ಎಂದು ಆತಂಕ ವ್ಯಕ್ತಪಡಿಸಿದರು.

“ಆಲ್ ಇಂಡಿಯಾ ಸರ್ವೀಸ್ ಗೆ ಬಂದಿರುವ ಕಾರಣವೇ ಜನರೊಂದಿಗೆ ಅಧಿಕಾರಿಗಳು ಇರಬೇಕೆಂದು. ಒಂದು ಪಾಲಿಸಿ ಜನರ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದು ಜನರ ಜೊತೆ ಕೆಲಸ ಮಾಡಿದವರಿಗೆ ತಿಳಿಯುತ್ತದೆ. ಮುಖ್ಯವಾಗಿ ಹೇಳಬೇಕೆಂದರೆ ಕೇಂದ್ರಕ್ಕಿಂತ ರಾಜ್ಯ ಸರ್ಕಾರಗಳಲ್ಲಿಯೇ ಐಎಎಸ್ ಅಧಿಕಾರಿಗಳ ಸೇವೆ ಮುಖ್ಯವಾಗಿರುತ್ತದೆ” ಎಂದು ಅಭಿಪ್ರಾಯಪಟ್ಟರು.

Join Whatsapp