ಬಿಜೆಪಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ: ರಾಹುಲ್ ದ್ರಾವಿಡ್

Prasthutha|

ಶಿಮ್ಲಾ: ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಅಧಿವೇಶನದಲ್ಲಿ ಟೀಂ ಇಂಡಿಯಾದ ಮುಖ್ಯ ಕೋಚ್ ಭಾಗವಹಿಸಲಿದ್ದಾರೆ ಎಂಬ ಸುದ್ದಿಯನ್ನು ಸ್ವತಃ ರಾಹುಲ್ ದ್ರಾವಿಡ್ ತಳ್ಳಿಹಾಕಿದ್ದಾರೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿರುವ ದ್ರಾವಿಡ್, ʻಇದೇ ತಿಂಗಳು 12ರಿಂದ 15ರವರೆಗೆ ಧರ್ಮಶಾಲಾದಲ್ಲಿ ಬಿಜೆಪಿ ಆಯೋಜಿಸುವ ಕಾರ್ಯಕ್ರಮವೊಂದರಲ್ಲಿ ನಾನು ಪಾಲ್ಗೊಳ್ಳುತ್ತಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿವೆ. ಆದರೆ ಇದರಲ್ಲಿ ಯಾವುದೇ ವಾಸ್ತವಾಂಶವಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇನೆʼ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಹ ದ್ರಾವಿಡ್ ಕುರಿತಾದ ವರದಿಯನ್ನು ತಳ್ಳಿಹಾಕಿದ್ದು, ಈ ಕುರಿತು ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ಬಿಸಿಸಿಐ ಮಾಧ್ಯಮ ವ್ಯವಸ್ಥಾಪಕ ಮೌಲಿನ್ ಪಾರಿಕ್ ತಿಳಿಸಿದ್ದಾರೆ.
ಧರ್ಮಶಾಲಾದಲ್ಲಿ 4 ದಿನಗಳ ಕಾಲ ನಡೆಯಲಿರುವ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ರಾಹುಲ್ ದ್ರಾವಿಡ್ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಧರ್ಮಶಾಲಾದ ಬಿಜೆಪಿ ಶಾಸಕ ವಿಶಾಲ್ ನೆಹ್ರಿಯಾ ಸೋಮವಾರ ಮಾಧ್ಯಮವೊಂದಕ್ಕೆ ತಿಳಿಸಿದ್ದರು.

- Advertisement -

ಅಧಿವೇಶನದಲ್ಲಿ ದ್ರಾವಿಡ್ ಉಪಸ್ಥಿತಿಯು ಯುವಕರಿಗೆ ,ರಾಜಕೀಯ ವನ್ನು ಹೊರತುಪಡಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಪ್ರೇರಣೆಯನ್ನು ತುಂಬಲಿದೆ ಎಂದು ವಿಶಾಲ್ ನೆಹ್ರಿಯಾ ಹೇಳಿದ್ದರು. ಬಿಜೆಪಿ ಶಾಸಕನ ಹೇಳಿಕೆ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ದ್ರಾವಿಡ್ ಕುರಿತು ವ್ಯಾಪಕ ಚರ್ಚೆ ನಡೆದಿತ್ತು.

ಟ್ವಿಟರ್ ಬಳೆಕದಾರರೊಬ್ಬರು ʻಗೋಡೆಯು ಬಿರುಕು ಬಿಟ್ಟಿದೆʼ ಎಂದು ಟ್ವೀಟ್ ಮಾಡಿದ್ದರು. ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವರು, ಹಿಮಾಚಲ ಪ್ರದೇಶದ ಸಿಎಂ ಜೈ ರಾಮ್ ಠಾಕೂರ್ ಸೇರಿದಂತೆ ಎಲ್ಲಾ ರಾಜ್ಯದ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ನೆಹ್ರಿಯಾ ಹೇಳಿದ್ದರು.

Join Whatsapp