ಹೊಸದಿಲ್ಲಿ: ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಲೇಖಕ ಮತ್ತು ಹಕ್ಕುಗಳ ಪರ ಹೋರಾಟಗಾರ ಆನಂದ್ ತೇಲ್ತುಂಬ್ಡೆ ತಾನು ಮಾವೊವಾದಿ ಸಿದ್ಧಾಂತದ ಟೀಕಾಕಾರ ಎಂಬುದಾಗಿ ರಾಷ್ಟೀಯ ತನಿಖಾ ದಳ (ಎನ್.ಐ.ಎ)ದ ನ್ಯಾಯಾಲಯದ ಮುಂದೆ ಸಲ್ಲಿಸಿದ ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ಈ ಪ್ರಕರಣದಲ್ಲಿ ಬಂಧಿತರಾಗಿರುವ ತೇಲ್ತುಂಬ್ಡೆ ಮತ್ತು ಇತರ ಹಲವಾರು ಹೋರಾಟಗಾರರು ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ)ದೊಂದಿಗೆ ಸಂಪರ್ಕವನ್ನು ಹೊಂದಿದ್ದರು ಎಂದು ಆರೋಪಿಸಲಾಗಿತ್ತು.
ತಾನು ನಿಷೇಧಿತ ಸಂಘಟನೆಯ ಸದಸ್ಯನಾಗಿದ್ದೆ ಎಂದು ಹೇಳಲು ಅಗತ್ಯವಿರುವ ಯಾವುದೇ ಸಾಕ್ಷ್ಯಗಳನ್ನು ಎನ್.ಐ.ಎ ತೋರಿಸಿಲ್ಲ ಎಂದು ತೇಲ್ತುಂಬ್ಡೆ ಅರ್ಜಿಯಲ್ಲಿ ತಿಳಿಸಿದ್ದಾರೆ. ತನ್ನ ಪುಸ್ತಕ Anti Imperialism and Annihilation of Caste (ಸಾಮ್ರಾಜ್ಯಶಾಹಿ ವಿರೋಧ ಮತ್ತು ಜಾತಿ ಸರ್ವನಾಶ) ಎಂಬ ತನ್ನ ಪುಸ್ತಕದಲ್ಲಿ ಮಾವೊವಾದಿ ಸಿದ್ಧಾಂತವನ್ನು ಟೀಕಿಸಿದ್ದೆ ಎಂಬುದಾಗಿ ಅವರು ಎನ್.ಐ.ಎ ನ್ಯಾಯಾಲಯದ ಮುಂದೆ ಸಲ್ಲಿಸಿದ ಜಾಮೀನು ಅರ್ಜಿಯಲ್ಲಿ ತಿಳಿಸಿದ್ದಾರೆ.