ಕಳೆದ ಚುನಾವಣೆಯ ಖರ್ಚಿಗಾಗಿ ಸ್ವಂತ ಮನೆಯನ್ನೂ ಲೀಸ್ ಗೆ ಹಾಕಿ ಬಾಡಿಗೆ ಮನೆಯಲ್ಲಿದ್ದೇನೆ: ಮಾಜಿ ಸಚಿವೆ ಮೋಟಮ್ಮ

Prasthutha|

ಚಿಕ್ಕಮಗಳೂರು: ನಮ್ಮಂಥವರಿಗೆ ಇನ್ನು ಮುಂದೆ ಚುನಾವಣೆ ಎದುರಿಸುವುದು ಕಷ್ಟ. ಕಳೆದ ಚುನಾವಣೆಯಲ್ಲಿ ನಾನು ಬಹಳಷ್ಟು ನೊಂದಿದ್ದೇನೆ. ಚುನಾವಣೆ ವೆಚ್ಚ ಭರಿಸಲು ಸ್ವಂತ ಮನೆಯನ್ನು ಲೀಸ್ ಗೆ ಹಾಕಿ ಈಗ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ ಎಂದು ಮಾಜಿ ಸಚಿವೆ ಮೋಟಮ್ಮ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಂಥವರು ಚುನಾವಣೆ ಎದುರಿಸುವುದು ಕಷ್ಟ. ಕಳೆದ ಎಲೆಕ್ಷನ್ ನಲ್ಲಿ ಸಾಕಷ್ಟು ನೊಂದಿದ್ದೇನೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ. ನನ್ನ ಮಗಳಿಗೆ ಟಿಕೆಟ್ ನೀಡುವಂತೆ ಕೇಳಿದ್ದೇನೆ ಎಂದು ಹೇಳಿದರು.
ಚುನಾವಣೆ ವೆಚ್ಚ ಭರಿಸಲು ಮನೆ ಭೋಗ್ಯಕ್ಕೆ ಹಾಕಿದ್ದೇನೆ. ನಾನು 8 ವಿಧಾನಸಭಾ ಚುನಾವಣೆಗಳನ್ನು ಎದುರಿಸಿದ್ದೇನೆ, 2018ರ ಚುನಾವಣೆ ಬಲು ದುಸ್ತರ ಚುನಾವಣೆಯಾಗಿತ್ತು. ಸಿದ್ದರಾಮಯ್ಯ ಅವರ ಜೊತೆ ಹಲವು ವರ್ಷ ಕೆಲಸ ಮಾಡಿದ್ದೇನೆ. ಸಿದ್ಧಾಂತಕ್ಕ ಬದ್ಧರಾಗಿರುವ ವ್ಯಕ್ತಿ ಎಂದು ನಾವು ಅವರನ್ನು ಗೌರವಿಸುತ್ತಿದ್ದೆವು. ಆದರೆ ನಾಲ್ವರು ದಲಿತರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಿದಾಗ ಅವರಲ್ಲಿ ಓರ್ವ ಮಹಿಳೆಯರಿಗೆ ಒಂದು ಸ್ಥಾನ ನೀಡಬಹುದಿತ್ತು. ನನಗೆ ಅನುಭವ, ಹಿರಿತನವಿತ್ತು. ಆದರೆ ನನ್ನನ್ನು ಪರಿಗಣಿಸಲಿಲ್ಲ. ಇದರಿಂದ ನನಗೆ ನೋವಾಗಿದೆ ಎಂದು ಹೇಳಿದ ಅವರು, ಸಿದ್ದರಾಮಯ್ಯ ಸಂತೆಯಲ್ಲಿ ಮೆಂತೆ ಕದ್ದವರೆಂದು ಆತ್ಮಕಥೆಯಲ್ಲಿ ನಾನು ಬರೆದಿಲ್ಲ. ನನ್ನ ಮನದ ನೋವನ್ನು ಹೇಳಿದ್ದೇನೆ ಎಂದು ಹೇಳಿದರು.
ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ ಕಾಂಗ್ರೆಸ್ ಸೇರ್ಪಡೆಗೆ ನನ್ನ ವಿರೋಧವಿದೆ. ಬಿಜೆಪಿಯವರ ಕೈ-ಬಾಯಿ ಸರಿ ಇಲ್ಲ. ಮೇವು ಸಿಗುವಲ್ಲಿಗೆ ಹೋಗುತ್ತಾರೆ. ಇದೇ ಕಾರಣದಿಂದ ನಮ್ಮಿಂದ 17 ಜನ ಬಿಜೆಪಿ ಸೇರಿದರು ಎಂದು ಹೇಳಿದ ಮೋಟಮ್ಮ, ಕುಮಾರಸ್ವಾಮಿಗೆ ಟಿಕೆಟ್ ಕೊಡುವುದರ ಬದಲು ಕಾಂಗ್ರೆಸ್ ನ ಬೂತ್ ಕಾರ್ಯಕರ್ತನಿಗೆ ನೀಡಲಿ ಎಂದು ಹೇಳಿದರು.



Join Whatsapp