ಲಕ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮುಗಿದ ಅಧ್ಯಾಯ ಎಂಬ ಭೀಮ್ ಆರ್ಮಿ ಅಧ್ಯಕ್ಷ ಚಂದ್ರಶೇಖರ್ ಆಝಾದ್ ಅವರ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ‘ಮೈತ್ರಿ ಮಾತುಕತೆಯ ವೇಳೆ ಒಂದು ಫೋನ್ ಕರೆ ಸ್ವೀಕರಿಸಿದ ಬಳಿಕ ಚಂದ್ರಶೇಖರ್ ಆಝಾದ್ ಮೈತ್ರಿ ಮಾಡಿಕೊಳ್ಳದೇ ಇರಲು ನಿರ್ಧರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
‘ಚಂದ್ರಶೇಖರ್ ಆಝಾದ್ ನೇತೃತ್ವದ ಭೀಮ್ ಆರ್ಮಿ ಪಕ್ಷಕ್ಕೆ ನಾನು ಎರಡು ಸ್ಥಾನಗಳನ್ನು ನೀಡಲು ನಿರ್ಧರಿಸಿದ್ದೆ. ಮೈತ್ರಿ ಮಾತುಕತೆ ನಡೆಯುವ ವೇಳೆಯ ಮಧ್ಯೆ ಚಂದ್ರಶೇಖರ್ ಅಜಾದ್ ಒಂದು ಫೋನ್ ಕರೆಯನ್ನು ಸ್ವೀಕರಿಸಿದರು. ಆ ಬಳಿಕ ಅವರು ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ನಿರಾಕರಿಸಿದ್ದಾರೆ’ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಇಲ್ಲ ಎಂದಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್
ಉತ್ತರ ಪ್ರದೇಶದ ವಿಧಾನಸಭೆಗೆ ಮುಂದಿನ ತಿಂಗಳು ನಡೆಯಲಿರುವ ಮಹತ್ವದ ಚುನಾವಣೆಯಲ್ಲಿ ಭೀಮ್ ಆರ್ಮಿ ಪಕ್ಷವು, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಭೀಮ್ ಆರ್ಮಿ ಪಕ್ಷದ ಮುಖ್ಯಸ್ಥ ಚಂದ್ರಶೇಖರ ಆಝಾದ್ ಸ್ಪಷ್ಟಪಡಿಸಿದ್ದಾರೆ.
“ಚುನಾವಣಾ ಮೈತ್ರಿಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರ ಜೊತೆ ಒಂದು ತಿಂಗಳು ಹಾಗೂ ಮೂರು ದಿವಸಗಳ ಕಾಲ ನಿರಂತರವಾಗಿ ಚರ್ಚೆ ನಡೆಸಿದ್ದೇವೆ. ಆದರೆ ಮೈತ್ರಿ ಕುರಿತು ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳುವುದು ಸಾಧ್ಯವಾಗಿಲ್ಲ. ಅಖಿಲೇಶ್ ಅವರಿಗೆ ಕೇವಲ ದಲಿತರ ಮತ ಮಾತ್ರ ಬೇಕಾಗಿದೆ. ದಲಿತರನ್ನು ವೋಟ್ ಬ್ಯಾಂಕ್ ಆಗಿ ಮಾತ್ರ ಉಪಯೋಗಿಸುತ್ತಾರೆ. ಬಹುಜನ ಸಮಾಜವನ್ನು ಅವರು ಅಪಹಾಸ್ಯ ಮಾಡಿದ್ದಾರೆ. ಹೀಗಾಗಿ ಸಮಾಜವಾದಿ ಪಕ್ಷದ ಜೊತೆ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಆಝಾದ್ ಸ್ಪಷ್ಟಪಡಿಸಿದ್ದಾರೆ.