ನವದೆಹಲಿ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಇದೇ ಪರಿಸ್ಥಿತಿಯಲ್ಲಿದ್ದರೆ 300 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಬುಧವಾರ ಹೇಳಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ 370ನೇ ವಿಧಿ ರದ್ದತಿ ಬಗ್ಗೆ ಸಾರ್ವಜನಿಕವಾಗಿ ತಮ್ಮ ಮೌನವನ್ನು ಸಮರ್ಥಿಸಿದ ಆಝಾದ್, ಈ ವಿಷಯ ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಇದ್ದು ನ್ಯಾಯಾಲಯ ಮತ್ತು ಕೇಂದ್ರ ಸರ್ಕಾರ ಮಾತ್ರ ಅದನ್ನು ಪುನರ್ ಸ್ಥಾಪಿಸಲು ಸಾಧ್ಯವಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 370ನೇ ವಿಧಿಯನ್ನು ರದ್ದುಗೊಳಿಸಿದ್ದರಿಂದ, ಅದು ಪುನಃ 370ನೇ ವಿಧಿಯನ್ನು ಸ್ಥಾಪಿಸುವ ಸಾಧ್ಯತೆ ಇಲ್ಲ ಎಂದು ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ಪ್ರದೇಶದಲ್ಲಿ ನಡೆದ ಜಾಥಾದಲ್ಲಿ ಗುಲಾಂ ನಬಿ ಆಝಾದ್ ಹೇಳಿದರು.
ನಾವು 300 ಸಂಸದರನ್ನು (ಸರ್ಕಾರ ರಚಿಸಲು) ಸ್ವಂತ ಬಲದಿಂದ ಯಾವಾಗ ಹೊಂದುತ್ತೇವೆ?. ಈ ರದ್ದುಪಡಿಸಲಾಗಿರುವ 370ನೇ ವಿಧಿಯನ್ನು ಪುನರ್ ಸ್ಥಾಪಿಸಬೇಕಾದರೆ ನಮಗೆ 300 ಸಂಸದರ ಬಲ ಬೇಕು. ದೇವರು ಅದಕ್ಕೆ ಬೇಕಾದ ಶಕ್ತಿ ನೀಡಲಿ. ಆದರೆ ಪ್ರಸಕ್ತ ಪರಿಸ್ಥಿತಿಯನ್ನು ನೋಡುವಾಗ 2024ರಲ್ಲಿ ಆ ಸಾಧ್ಯತೆ ಕಾಣುತ್ತಿಲ್ಲ. ಹಾಗಾಗಿ ನಾನು 370ನೇ ವಿಧಿಯನ್ನು ಪುನರ್ ಸ್ಥಾಪಿಸುತ್ತೇನೆ ಎಂದು ಸುಳ್ಳು ಭರವಸೆ ನೀಡುವುದಿಲ್ಲ ಎಂದು ಆಝಾದ್ ಹೇಳಿದರು.