ಕೀವ್: ನಾನು ಉಕ್ರೇನ್’ ನಲ್ಲಿಯೇ ಇದ್ದೇನೆ, ಶಸ್ತ್ರಾಸ್ತ್ರ ತ್ಯಜಿಸಲು ಸಾಧ್ಯವಿಲ್ಲ ಎಂದು ಉಕ್ರೇನ್ ಅಧ್ಯಕ್ಷ ಪೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಶನಿವಾರ ರಾಜಧಾನಿ ಕೀವ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯನ್ನು ಉಕ್ರೇನ್ ಸೈನ್ಯವು ಸಮರ್ಥವಾಗಿ ಹಿಮ್ಮೆಟ್ಟಿಸಿದೆ ಎಂದು ಹೇಳಿರುವ ಅಧ್ಯಕ್ಷ ಪೊಲೊಡಿಮಿರ್ ಝೆಲೆನ್ಸ್ಕಿ ಅವರು ವೀಡಿಯೋವೊಂದನ್ನು ಬಿಡುಗಡೆ ಮಾಡಿ, ನನ್ನ ವಿರುದ್ಧ ಪಿತೂರಿ ನಡೆದಿದ್ದು, ನಾನು ಉಕ್ರೇನ್ ನಿಂದ ಪಲಾಯಣ ಮಾಡಿಲ್ಲ. ನಾನು ಉಕ್ರೇನ್ ನಲ್ಲಿಯೇ ಇದ್ದೇನೆ. ಶಸ್ತ್ರಾಸ್ತ್ರ ತ್ಯಜಿಸದೆ ರಷ್ಯಾ ವಿರುದ್ಧ ಹೋರಾಡುವ ಪ್ರತಿಜ್ಞೆ ಮಾಡಿರುವುದಾಗಿ ತಿಳಿಸಿದ್ದಾರೆ.
“ನಾನು ಇಲ್ಲಿಯೇ ಇದ್ದೇನೆ. ಉಕ್ರೇನ್ ಯಾವುದೇ ಆಯುಧಗಳನ್ನು ತ್ಯಜಿಸಲು ಸಿದ್ಧವಿಲ್ಲ. ನಾವು ನಮ್ಮ ರಾಷ್ಟ್ರವನ್ನು ರಕ್ಷಿಸುತ್ತೇವೆ. ಏಕೆಂದರೆ ನಮ್ಮ ಶಸ್ತ್ರಾಸ್ತ್ರಗಳ ಮೇಲೆ ನಂಬಿಕೆಯಿದೆ ಮತ್ತು ಸದೃಢವಾಗಿದೆ ಎಂದು ಅವರು ಘೋಷಿಸಿದ್ದಾರೆ.
ಈ ವೇಳೆ ಉಕ್ರೇನ್ ಅಧ್ಯಕ್ಷ ಶರಣಾಗಿದ್ದಾರೆ ಅಥವಾ ಓಡಿಹೋದರು ಎಂಬ ಸುಳ್ಳು ಸುದ್ದಿಯನ್ನು ಈ ವೇಳೆ ಖಂಡಿಸಿದ್ದಾರೆ.
ನಮ್ಮ ಸೇನೆಗೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ನಾನು ಕರೆ ನೀಡಿದ್ದೇನೆ ಮತ್ತು ದೇಶದಿಂದ ಪಲಾಯನ ಮಾಡುವ ಕಾರ್ಯವನ್ನು ಮಾಡುತ್ತಿದ್ದೇನೆ ಎಂದು ಹೇಳಿಕೆ ನೀಡುವ ನಕಲಿ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಅಧ್ಯಕ್ಷರು ಈ ಸ್ಪಷ್ಟೀಕರಣ ನೀಡಿದ್ದಾರೆ.