ಹೈದರಾಬಾದ್: ಸ್ಟಾಂಡ್ ಆಫ್ ಕಾಮೆಡಿಯನ್ ಮುನಾವರ್ ಫಾರೂಕಿ ಅವರ ಪ್ರದರ್ಶನವನ್ನು ಹೈದರಾಬಾದ್’ನಲ್ಲಿ ತಡೆಯುವುದಾಗಿ ಬಿಜೆಪಿ ಶಾಸಕ ರಾಜಾ ಸಿಂಗ್ ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ.
ನಗರದಲ್ಲಿ ಕಾರ್ಯಕ್ರಮ ಆಯೋಜಿಸಿದರೆ ಹಾಸ್ಯ ಕಲಾವಿದನಿಗೆ ತಕ್ಕ ಪಾಠವನ್ನು ಕಲಿಸಲಾಗುವುದೆಂದು ಶಾಸಕ ರಾಜಾ ಸಿಂಗ್ ಬೆದರಿಕೆ ಹಾಕುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಫಾರೂಕಿ ಅವರಿಗೆ ಬೆದರಿಕೆ ಹಾಕುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಜನವರಿಯಲ್ಲಿ, ಹಾಸ್ಯ ಕಲಾವಿದ ಫಾರೂಕಿ ಅವರು ದೇವತೆಗಳನ್ನು ಅಪಹಾಸ್ಯ ಮಾಡುವ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ ಬಿಜೆಪಿ ನಾಯಕರು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ನಗರದಲ್ಲಿ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು.
ಫಾರೂಕಿ ಅವರು ಹೈದರಾಬಾದ್’ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದರೆ ಹಿಂದೂ ಸಮುದಾಯದ ಶಕ್ತಿಯನ್ನು ತೋರಿಸುವುದಾಗಿ ಶಾಸಕ ಬೆದರಿಕೆ ಹಾಕುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಹೈದರಾಬಾದ್’ನಲ್ಲಿ ತನ್ನ ಕಾರ್ಯಕ್ರಮವನ್ನು ಆಗಸ್ಟ್ 20 ಆಯೋಜಿಸುವ ಕುರಿತು ಇನ್’ಸ್ಟಗ್ರಾಮ್’ನಲ್ಲಿ ಪೋಸ್ಟ್ ಮಾಡಿದ ಬೆನ್ನಲ್ಲೇ ಬಿಜೆಪಿ ಶಾಸಕ ರಾಜಾ ಸಿಂಗ್ ಅವರು, ಕಾರ್ಯಕ್ರಮವನ್ನು ತಡೆಯುವುದಾಗಿ ಬೆದರಿಕೆ ಹಾಕಿದ್ದಾರೆ.