ಕೋಲ್ಕತ್ತ: ಫೋರ್ಡ್ ಇಂಡಿಯಾ ಮೋಟಾರ್ ಕಂಪೆನಿ ತನ್ನ ಘಟಕವನ್ನು ಮುಚ್ಚುವ ಯೋಜನೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ನೂರಾರು ಕಾರ್ಮಿಕರು ಘಟಕ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿದರು. ಮಾತ್ರವಲ್ಲ ತಮ್ಮ ಉದ್ಯೋಗವನ್ನು ಖಾತರಿ ಪಡಿಸುವಂತೆ ಆಗ್ರಹಿಸಿದರು.
ನೀಲಿ ಸಮವಸ್ತ್ರ ಧರಿಸಿದ ಕಾರ್ಮಿಕರು ಗುಜರಾತಿನ ಸನಂದ್ ನಗರದಲ್ಲಿ ಫೋರ್ಡ್ ನ ಕಾರ್ ತಯಾರಿಕೆ ಮತ್ತು ಎಂಜಿನ್ ತಯಾರಿಸುವ ಘಟಕದ ಮುಂಭಾಗದಲ್ಲಿ ಜಮಾಯಿಸಿ, ಕಂಪೆನಿ ಈ ನಡೆಯು ನಮ್ಮ ಜೀವನೋಪಾಯವನ್ನು ಕಸಿಯಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸಕ್ತ ಸನ್ನಿವೇಶದಲ್ಲಿ ಫೋರ್ಡ್ ಕಂಪೆನಿಯನ್ನು ಮುಚ್ಚದಂತೆ ಪ್ರತಿಭಟನಾಕಾರರು ಕಂಪೆನಿ ಮತ್ತು ಸರ್ಕಾರವನ್ನು ಒತ್ತಾಯಿಸಿದರು.
ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಫೋರ್ಡ್ ನಲ್ಲಿ 1200 ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಫೋರ್ಡ್ ಇಂಡಿಯಾ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ವಾಹನ ತಯಾರಕರು ಭಾರತದಿಂದ ನಿರ್ಗಮಿಸುತ್ತಿರುವುದು ಮತ್ತು ಘಟಕವನ್ನು ಮುಚ್ಚುತ್ತಿರುವುದರಿಂದ ದೇಶದ ನಿರುದ್ಯೋಗ ಬಿಕ್ಕಟ್ಟು ಇನ್ನುಷ್ಟು ಬಿಗಡಾಯಿಸಲಿದೆ.