ಎಂಜಿನಿಯರಿಂಗ್ ಶಿಕ್ಷಣದಲ್ಲಿ ಡಿಸೆಂಬರ್ ವೇಳೆಗೆ ಭಾರೀ ಸುಧಾರಣೆ: ಅಶ್ವತ್ಥನಾರಾಯಣ

Prasthutha|

ಬೆಂಗಳೂರು: ಡಿಸೆಂಬರ್ ವೇಳೆಗೆ ಎಂಜಿನಿಯರಿಂಗ್ ಶಿಕ್ಷಣದಲ್ಲಿ ಸಮಗ್ರ ಸುಧಾರಣೆ ತರಲಾಗುವುದು. ಈ ಪ್ರಕ್ರಿಯೆ ಈಗ ಅಂತಿಮ ರೂಪದಲ್ಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

- Advertisement -

ಮಾಗಡಿ ರಸ್ತೆಯ ಈಸ್ಟ್ ವೆಸ್ಟ್ ಎಂಜಿನಿಯರಿಂಗ್ ಕಾಲೇಜು ಸೋಮವಾರ ಎಥ್ನೋಟೆಕ್ ಅಕಾಡೆಮಿಯ ಜತೆಗೂಡಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ‘ರವಿಶಂಕರ್ ಉತ್ಕೃಷ್ಟತಾ ಕೇಂದ್ರ’ವನ್ನು ಉದ್ಘಾಟಿಸಿ ಮಾತನಾಡಿದರು.

ಸದ್ಯಕ್ಕೆ ರಾಜ್ಯದಲ್ಲಿ ಸರಕಾರಿ ಕಾಲೇಜುಗಳಲ್ಲಿ ಕಲಿಕೆ ಮತ್ತು ಬೋಧನೆಯ ಡಿಜಿಟಲೀಕರಣ ನಡೆಯುತ್ತಿದೆ. ಇದನ್ನು ಸದ್ಯದಲ್ಲೇ ಖಾಸಗಿ ಕಾಲೇಜುಗಳಿಗೂ ವಿಸ್ತರಿಸಲಾಗುವುದು ಎಂದು ಅವರು ನುಡಿದರು.

- Advertisement -

ರಾಜ್ಯದಲ್ಲಿ ಉನ್ನತ ಶಿಕ್ಷಣ ವಲಯದಲ್ಲಿ ಅಭೂತಪೂರ್ವ ಸುಧಾರಣೆಗಳನ್ನು ತರಲಾಗುತ್ತಿದೆ. ಈಗ ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಉದ್ಯಮಗಳ ಜತೆ ಬೆಸೆಯಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯನ್ನು ಬೆಳೆಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಎಂಜಿನಿಯರಿಂಗ್ ಶಿಕ್ಷಣದ ಆಡಳಿತ, ಪಠ್ಯಕ್ರಮ, ಇಂಟರ್ನ್ಶಿಪ್ ಇತ್ಯಾದಿಗಳನ್ನು ಆಮೂಲಾಗ್ರವಾಗಿ ಸುಧಾರಿಸಲಾಗುವುದು. ಇಂಟರ್ನ್ಶಿಪ್ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವೇತನ ಕೊಡುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ಅವರು ಹೇಳಿದರು.

ಗುಣಮಟ್ಟದ ಶಿಕ್ಷಣ ಮಾತ್ರವೇ ಸಮಾಜದ ಸಬಲೀಕರಣ ಸಾಧ್ಯ. ನಾವು ಸೀಮಿತವಾಗಿ ಯೋಚಿಸದೆ ಜಾಗತಿಕ ಸ್ತರದಲ್ಲಿ ಸ್ಪರ್ಧೆಯನ್ನು ಎದುರಿಸುವಂತಹ ಗುರಿಯನ್ನು ಹೊಂದುವುದು ಅತ್ಯಗತ್ಯವಾಗಿದೆ. ಇಲ್ಲದೆ ಹೋದರೆ ಅವಕಾಶಗಳು ಕೈತಪ್ಪಿ ಹೋಗುತ್ತವೆ ಎಂದು ಸಚಿವರು ಪ್ರತಿಪಾದಿಸಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಬಿಜಿಎಸ್ ಮತ್ತು ಎಸ್ ಜೆ ಬಿ ಸಮೂಹ ಸಂಸ್ಥೆಗಳು ಮತ್ತು ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಕಾಶನಾಥ ಸ್ವಾಮೀಜಿ,
ಈಸ್ಟ್ ವೆಸ್ಟ್ ಶಿಕ್ಷಣ ಸಮೂಹದ ಅಧ್ಯಕ್ಷೆ ರಶ್ಮಿ ರವಿಶಂಕರ್, ನ್ಯಾಕ್ ನಿರ್ದೇಶಕ ಡಾ.ಶಾಮಸುಂದರ್, ಎಥ್ನೋಟೆಕ್ ಅಕಾಡೆಮಿಯ ಮುಖ್ಯಸ್ಥ ಕಿರಣ್ ರಾಜಣ್ಣ, ಈಸ್ಟ್ ವೆಸ್ಟ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ತೇಜಸ್ ಕಿರಣ ಮುಂತಾದವರು ಉಪಸ್ಥಿತರಿದ್ದರು.



Join Whatsapp