ಬೆಂಗಳೂರು: ಸುರತ್ಕಲ್ ಟೋಲ್ ಗೇಟ್ ರದ್ದು ಪಡಿಸಿ, ಹೆಜಮಾಡಿ ಟೋಲ್ನಲ್ಲಿ ದುಪ್ಪಟ್ಟು ಸುಲಿಗೆ ಮಾಡುತ್ತಿರುವ ಕುರಿತು ಕಾಂಗ್ರೆಸ್ ನಾಯಕ ಬಿ. ಕೆ. ಹರಿಪ್ರಸಾದ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕರಾವಳಿ ಸಂಸದರು ಯಾವ ಪುರುಷಾರ್ಥಕ್ಕೆ ಸ್ವಯಂ ಬೆನ್ನುತಟ್ಟಿಕೊಂಡಿದ್ದು? ವಾಹನ ಸವಾರರ ಬೆವರಿನ ಹಣವನ್ನು ಜಿಗಣೆಯಂತೆ ಹೀರುತ್ತಿದ್ದ ಸುರತ್ಕಲ್ ಟೋಲ್ ಗೇಟ್ ರದ್ದು ಪಡಿಸಿ, ಹೆಜಮಾಡಿ ಟೋಲ್ ನಲ್ಲಿ ದುಪ್ಪಟ್ಟು ಸುಲಿಗೆ ಮಾಡೋದ್ಯಾಕೆ ಎಂದು ಕಿಡಿ ಕಾರಿದರು.
ಅಕ್ರಮ ಟೋಲ್ ಗೇಟ್ ತೆರವುಗೊಳಿಸಲು ಕರಾವಳಿಯಲ್ಲಿ ಅಹೋರಾತ್ರಿ ಹೋರಾಟ ನಡೆಯುತ್ತಿದ್ರೆ, ತಾವು ಟೋಲ್ ನ್ನು ಉಳಿಸಲು ಶಕ್ತಿಮೀರಿ ಶ್ರಮಿಸಿರುವ ತೆರೆ ಮರೆಯ ಕಸರತ್ತನ್ನು ಬಹಿರಂಗಪಡಿಸುತ್ತಿರಾ? ಅಥವಾ ಕಾರು ಅಲ್ಲಾಡಿಸಿದ ಕಾರಣಕ್ಕೆ ಬಹಿರಂಗವಾಗಿ ಕರಾವಳಿಗರ ಮೇಲೆ ಸೇಡು ತೀರಿಸಿಕೊಂಡಿದ್ದನ್ನು ಒಪ್ಪಿಕೊಳ್ಳುತ್ತಿರಾ ಎಂದು ಪ್ರಶ್ನಿಸಿದರು.
ಕರಾವಳಿಯ ಬಿಜೆಪಿ ಸಂಸದರು, ಶಾಸಕರು ಟೋಲ್ ಗೇಟ್ ಗಳ ಪರ ವಕಾಲತ್ತು ವಹಿಸುತ್ತಿರುವುದು ಯಾಕೆ? ಸುಲಿಗೆ ಮಾಡುತ್ತಿರುವ ಹಣದಲ್ಲಿ ತಮ್ಮ ಪಾಲೆಷ್ಟು ಬಹಿರಂಗಪಡಿಸಿ.ಮತಕೊಟ್ಟ ಜನರಿಗೆ ದ್ರೋಹ ಮಾಡಿ, ಬೆನ್ನು ತಟ್ಟಿಕೊಂಡಿರುವ ಸಂಸದರದ್ದು ಲಜ್ಜೆಗೆಟ್ಟ ಪರಮಾವಧಿ. ಅಕ್ರಮ ಟೋಲ್ ಅಂತೆ ನಿಮ್ಮನ್ನ ಎತ್ತಂಗಡಿ ಮಾಡುವ ಕಾಲ ಬಂದಾಯ್ತು ಎಂದರು.