ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸೋಮವಾರ ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ ಹಿಂದಿರುಗಿಸಿದ ಬಳಿಕ, ಪೊಲೀಸರು ಅವರಿಗೆ ಗೃಹ ಬಂಧನ ವಿಧಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಆಪಾದಿಸಿದೆ.
ಇಂದು ರೈತರು ಭಾರತ್ ಬಂದ್ ಗೆ ಕರೆ ನೀಡಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸಲು ಸಾಧ್ಯವಾಗದಂತೆ ಕೇಜ್ರಿವಾಲ್ ಗೆ ಈ ರೀತಿ ಗೃಹ ಬಂಧನದಲ್ಲಿರಿಸಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ಸೋಮವಾರ ಸಿಂಘು ಗಡಿಯಲ್ಲಿ ಪ್ರತಿಭಟನಾ ನಿರತ ರೈತರನ್ನು ಕೇಜ್ರಿವಾಲ್ ಭೇಟಿಯಾಗಿ ಬಂದ ಬಳಿಕ, ಪೊಲೀಸರು ಸಿಎಂ ಮನೆ ಒಳಗೆ ಹೋಗಲು ಮತ್ತು ಹೊರ ಹೋಗಲು ಯಾರಿಗೂ ಅವಕಾಶ ನೀಡುತ್ತಿಲ್ಲ ಎಂದು ಆಮ್ ಆದ್ಮಿ ಪಕ್ಷ ಇಂದು ಟ್ವೀಟ್ ಮಾಡಿದೆ.
ಕೇಜ್ರಿವಾಲ್ ಅವರ ಎಲ್ಲಾ ಸಭೆಗಳನ್ನು ರದ್ದುಪಡಿಸಲಾಗಿದೆ. ಕೇಜ್ರಿವಾಲ್ ರ ಮನೆ ಸುತ್ತ ತಡೆಬೇಲಿಗಳನ್ನು ಹಾಕಲಾಗಿದ್ದು, ಯಾರೊಬ್ಬರಿಗೂ ಹೊರ ಹೋಗದಂತೆ, ಒಳ ಬರದಂತೆ ತಡೆಯಲಾಗುತ್ತಿದೆ ಎಂದು ಪಕ್ಷ ತಿಳಿಸಿದೆ.