ಜಾತಿವಾದಿ ಭಯೋತ್ಪಾದನೆ | ಪಿಳ್ಳೈ ಸಮುದಾಯದ ಹುಡುಗಿಯನ್ನು ಪ್ರೀತಿಸಿ ಮದುವೆಯಾದ ಗೊಲ್ಲನ್ ಜಾತಿಯ ಹುಡುಗನ ಇರಿದು ಹತ್ಯೆ ಮಾಡಿದರು!

Prasthutha|

ತಿರುವನಂತಪುರಂ : ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ 22ರ ಹರೆಯದ ಯುವಕನೊಬ್ಬನನ್ನು ಆತನ ಪತ್ನಿಯ ಕುಟುಂಬಿಕರು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಜಾತಿವಾದಿ ಮನೋಸ್ಥಿತಿಯ ಹುಡುಗಿಯ ಕುಟುಂಬಿಕರು, ಆಕೆಯ ಅನ್ಯಜಾತಿಯ ಪತಿಯನ್ನು ಇರಿದು ಹತ್ಯೆ ಮಾಡಿದ್ದಾರೆ.

ಒಬಿಸಿ ಗೊಲ್ಲನ್ ಸಮುದಾಯದ, ಪೈಂಟಿಂಗ್ ಕೆಲಸ ಮಾಡುವ ದಿನಗೂಲಿ ನೌಕರ ಅನೀಶ್ ಎಂಬ ಯುವಕನನ್ನು ಶುಕ್ರವಾರ ಸಂಜೆ ಆತನ ಪತ್ನಿ, ತಮಿಳು ಪಿಳ್ಳೈ ಸಮುದಾಯದ ಹರಿತಾಳ ತಂದೆ ಮತ್ತು ಸೋದರ ಸಂಬಂಧಿ ಹತ್ಯೆ ಮಾಡಿದ್ದಾರೆ. ಹರಿತಾ ಮತ್ತು ಅನೀಶ್ ಮದುವೆಯಾಗಿ ಮೂರು ತಿಂಗಳಾದ ದಿನವನ್ನು ಗುರಿಯಾರಿಸಿಕೊಂಡು ಶುಕ್ರವಾರ ಹತ್ಯೆ ಮಾಡಲಾಗಿದೆ.

- Advertisement -

ಹರಿತಾಳ ತಂದೆ ಪ್ರಭು ಕುಮಾರ್ ಮತ್ತು ಅಂಕಲ್ ಸುರೇಶ್ ಅವರನ್ನು ಪೊಲೀಸರು ಬಂಧಿಸಿ, ಕೊಲೆ ಪ್ರಕರಣ ದಾಖಲಿಸಿದ್ದಾರೆ. ತೆಂಗುರಿಸ್ಸಿ ಗ್ರಾಮ ವ್ಯಾಪ್ತಿಯ ಮಲಂಗುಲಂಬುನಲ್ಲಿ ಅನೀಶ್ ಮತ್ತು ಆತನ ಸಹೋದರ ಅಂಗಡಿಗೆಂದು ತೆರಳಿದ್ದ ವೇಳೆ ದಾಳಿ ನಡೆದಿದೆ. ಗಂಭೀರ ಗಾಯಗೊಂಡಿದ್ದ ಅನೀಶ್ ನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಗಂಭೀರ ಗಾಯಗಳಿಂದಾಗಿ ಆತ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.

ಅನೀಶ್ ಮತ್ತು ಹರಿತಾ (19) ಶಾಲಾ ದಿನಗಳಿಂದಲೇ ಸಂಬಂಧ ಹೊಂದಿದ್ದರು ಎನ್ನಲಾಗುತ್ತಿದೆ. ಕಳೆದ ಸೆಪ್ಟಂಬರ್ ನಲ್ಲಿ ಕುಟುಂಬದವರ ಅಪೇಕ್ಷೆಗೆ ವಿರುದ್ಧವಾಗಿ ಇಬ್ಬರೂ ಪರಾರಿಯಾಗಿ ರಿಜಿಸ್ಟರ್ಡ್ ಕಚೇರಿಯಲ್ಲಿ ವಿವಾಹವಾಗಿದ್ದರು.

ಅನೀಶ್ ಕುಟುಂಬ ಬಡತನದ ಹಿನ್ನೆಲೆಯದ್ದಾಗಿದ್ದು, ಹರಿತಾಳ ಸಮುದಾಯಕ್ಕಿಂತ ಕೆಳಸ್ಥಾನಮಾನದ ಸಮುದಾಯವೆಂದು ಗುರುತಿಸಲಾಗುತ್ತದೆ. ನೀವು ಮದುವೆಯಾಗಿ ಮೂರು ತಿಂಗಳೂ ಬದುಕಲು ಬಿಡುವುದಿಲ್ಲ ಎಂದು ಹರಿತಾಳ ಕುಟುಂಬಿಕರು ಬೆದರಿಕೆಯೊಡ್ಡಿದ್ದರು ಎಂದು ಅನೀಶ್ ನ ತಂದೆ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ. ಆದಾಗ್ಯೂ, ಬೆದರಿಕೆಯ ಹಿನ್ನೆಲೆಯಲ್ಲಿ ಅನೀಶ್ ಕಳೆದ ಮೂರು ತಿಂಗಳಿನಿಂದ ಮನೆಬಿಟ್ಟು ಹೊರಬಂದಿರಲಿಲ್ಲ.      

- Advertisement -