ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಹಿಂದುತ್ವವಾದಿಗಳ ವಿರುದ್ಧ ತಿರುಗಿಬಿದ್ದಿದ್ದಾರೆ. ಹಿಂದುತ್ವವಾದಿಗಳು ಹೇಡಿಗಳು ಸೈಬರ್ ಜಗತ್ತಿನಲ್ಲಿ ದ್ವೇಷವನ್ನು ಹರಡುವ ಕೆಲಸ ಮಾಡುತ್ತಿದ್ದಾರೆ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಕಳೆದ ತಿಂಗಳು ಕೂಡ ಇಂಥದ್ದೇ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ, ಬಿಜೆಪಿ ಪಕ್ಷವು ರಾಜಕೀಯ ಉದ್ದೇಶಕ್ಕಾಗಿ ಹಿಂದುತ್ವವನ್ನು ಬಳಕೆ ಮಾಡಿಕೊಳ್ಳುತ್ತಿದೆ. ಇದು ಹಿಂದುಗಳ ದೇಶ, ಹಿಂದುತ್ವವಾದಿಗಳದ್ದಲ್ಲ ಎಂದು ಹೇಳಿದ್ದರು.
ಸಾಮಾಜಿಕ ಮಾಧ್ಯಮಗಳಲ್ಲಿ ತಾನು ಹಿಂದು ವಿರೋಧ ಎನ್ನುವ ಟೀಕೆಗಳು ವ್ಯಕ್ತವಾಗುತ್ತಿರುವ ಬಗ್ಗೆ “ನೋ ಫಿಯರ್” (NoFear) ಎನ್ನುವ ಹ್ಯಾಶ್ ಟ್ಯಾಗ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಹಿಂದುತ್ವವನನು ಬೋಧನೆ ಮಾಡುತ್ತೇವೆ ಎಂದು ಹೇಳುವ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳ ವೇದಿಕೆಯನ್ನು ದ್ವೇಷವನ್ನು ಹರಡುತ್ತಿದ್ದಾರೆ ಎಂದು ಟೀಕೆ ಮಾಡಿದರು. ಫೇಸ್ ಬುಕ್, ಟ್ವಿಟರ್ ಹಾಗೂ ಇನ್ಸ್ ಟಾಗ್ರಾಮ್ ನಲ್ಲಿ ಇಂಥ ದ್ವೇಷಗಳನ್ನು ಹರಡುತ್ತಿರುವ ಹಿಂದುತ್ವವಾದಿ ವ್ಯಕ್ತಿಗಳನ್ನು ಹೇಡಿಗಳು ಎಂದು ಕರೆದಿರುವ ರಾಹುಲ್ ಗಾಂಧಿ, ಬಹಿರಂಗವಾಗಿ ಬರಲು ಇವರಿಗೆಲ್ಲ ಸಾಧ್ಯವಾಗುವುದಿಲ್ಲ, ಸೈಬರ್ ಜಗತ್ತಿನಲ್ಲಿ ನಿರ್ಮಾಣವಾಗುತ್ತಿರುವ ದ್ವೇಷದ ವಿರುದ್ಧ ತನ್ನ ಬೆಂಬಲಿಗರು ಹೋರಾಟ ನಡೆಸಬೇಕು ಎಂದು ಆಗ್ರಹಿಸಿದರು.