ಗುರ್ಗಾಂವ್: ಕ್ರಿಸ್ ಮಸ್ ಪ್ರಾರ್ಥನೆಗೆ ಅಡ್ಡಿಪಡಿಸಿದ ಸಂಘಪರಿವಾರ

Prasthutha|

ಶುಕ್ರವಾರದ ನಮಾಝ್ ಬಳಿಕ ಇದೀಗ ಚರ್ಚ್ ಪ್ರಾರ್ಥನೆಗೂ ಅಡ್ಡಿ

- Advertisement -

ನವದೆಹಲಿ: ಸಂಘಪರಿವಾರದ ಕಾರ್ಯಕರ್ತರು ಶುಕ್ರವಾರದ ನಮಾಝ್ ಗೆ ಹಲವು ವಾರದಿಂದ ನಿರಂತರ ಅಡ್ಡಿಪಡಿಸಿದ ಬಳಿಕ ಇದೀಗ ಕ್ರಿಸ್ಮಸ್ ಆಚರಣೆ ನಡೆಸದಂತೆ ಚರ್ಚ್ ಗೆ ನುಗ್ಗಿ ದಾಂಧಲೆಗೈದ ಘಟನೆ ಗುರ್ಗಾಂವ್ ನಿಂದ ವರದಿಯಾಗಿದೆ.

ಜೈ ಶ್ರೀರಾಮ್, ಭಾರತ್ ಮಾತಾ ಕಿ ಜೈ ಘೋಷಣೆಗಳನ್ನು ಕೂಗುತ್ತಾ, ಸಂಘಪರಿವಾರದ ಕಾರ್ಯಕರ್ತರು ಹರ್ಯಾಣದ ಪಟೌಡಿಯಲ್ಲಿರುವ ಚರ್ಚ್ ಆವರಣಕ್ಕೆ ಬಲವಂತವಾಗಿ ನುಗ್ಗಿ ಕ್ರಿಸ್ಮಸ್ ಹಬ್ಬದ ಆಚರಣೆಗೆ ಅಡ್ಡಿಪಡಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವೇಳೆ ಚರ್ಚ್ ನಲ್ಲಿ ಅಳವಡಿಸಲಾಗಿದ್ದ ಮೈಕ್ ಗಳನ್ನು ಕಿತ್ತುಕೊಂಡು ದುಷ್ಕೃತ್ಯ ಮೆರೆಯುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

- Advertisement -

ಘಟನೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸ್ಥಳೀಯ ಪಾದ್ರಿಯೊಬ್ಬರು, ಚರ್ಚ್ ನ ಸುತ್ತಲೂ ಮಹಿಳೆಯರು ಮತ್ತು ಮಕ್ಕಳು ನೆರೆದು ಪ್ರಾರ್ಥನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸಂಘಪರಿವಾರದ ಕಾರ್ಯಕರ್ತರು ಗೂಂಡಾಗಿರಿ ಮೆರೆದಿದ್ದಾರೆ. ಇದು ಧಾರ್ಮಿಕ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತಿಳಿಸಿದರು.

ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ದೂರು ದಾಖಲಿಸಲಾಗಿಲ್ಲ ಎಂದು ಪಟೌಡಿ ಠಾಣಾಧಿಕಾರಿ ಅಮಿತ್ ಕುಮಾರ್ ತಿಳಿಸಿದ್ದಾರೆ.

ಈ ಮಧ್ಯೆ ಹರ್ಯಾಣದಲ್ಲಿ ಹಲವು ವಾರಗಳಿಂದ ನಿರಂತರವಾಗಿ ಮುಸ್ಲಿಮರ ಶುಕ್ರವಾರದ ನಮಾಝ್ ಗೆ ಅಡ್ಡಿಪಡಿಸಲಾಗಿತ್ತು. ಅದೇ ರೀತಿ ಕ್ರಿಸ್ಮಸ್ ನ ಸಂದರ್ಭದಲ್ಲಿ ಕ್ರಿಶ್ಚಿಯನ್ನರ ಧಾರ್ಮಿಕ, ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಸಿ ಸಂಘಪರಿವಾರ ದಾಳಿ ಮಾಡುತ್ತಿದೆ.



Join Whatsapp