ಮಡಹಳ್ಳಿ ಬಿಳಿಕಲ್ಲು ಕ್ವಾರಿಯಲ್ಲಿ ಗುಡ್ಡ ಕುಸಿತ;ಮೂವರು ಮೃತ್ಯು, ಮುಂದುವರೆದ ಶೋಧ ಕಾರ್ಯ

Prasthutha|

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಬಿಳಿಕಲ್ಲು ಕ್ವಾರಿಯಲ್ಲಿ ಗುಡ್ಡ ಕುಸಿತ ಪ್ರಕರಣದಲ್ಲಿ ಮೂವರು ಮೃತಪಟ್ಟಿರುವುದು ಖಚಿತವಾದ ಹಿನ್ನೆಲೆಯಲ್ಲಿ ಎಸ್.ಡಿ.ಆರ್.ಎಫ್ ಹಾಗೂ ಎನ್.ಡಿ.ಆರ್.ಎಫ್ , ಅಗ್ನಿಶಾಮಕ ದಳ ಸಿಬ್ಬಂದಿಗಳು ಹಗಲು ರಾತ್ರಿಯೆನ್ನದೆ ಕಾರ್ಯಾಚರಣೆ ಮುಂದುವರೆಸಿದ್ದಾರೆ.

- Advertisement -

ಮಣ್ಣು ಬಂಡೆಗಳ ಅಡಿಯಲ್ಲಿ ಎರಡು ಶವ ಸಿಲುಕಿರುವುದನ್ನು ಖಚಿತಪಡಿಸಿರುವ ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ ಸಿಬ್ಬಂದಿ ಇಬ್ಬರ ದೇಹ ನಜ್ಜು ಗುಜ್ಜಾಗಿದ್ದು, ಹಿಟಾಚಿಗಳಡಿ ಸಿಲುಕಿಕೊಂಡಿರುವುದನ್ನು ಗುರುತಿಸಿ ಒಂದು ಹಿಟಾಚಿಯಿಂದ ಶವವನ್ನು ಹೊರ ತೆಗೆದಿದ್ದಾರೆ.

 ಉತ್ತರ ಪ್ರದೇಶದ ಗೋರಖ್ ಪುರದ ಹಜೀಂ ಉಲ್ಲ (24), ಮಿರಾಜ್ (28) ಹಾಗೂ ಸರ್ಫ್ ರಾಜ್ (18) ಎಂಬವರು ಮಣ್ಣಿನಡಿಯಲ್ಲಿ ಸಿಲುಕಿದ್ದು ಅವಿವಾಹಿತರಾದ ಈ ಮೂವರು ಒಂದು ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದು ಉತ್ತರ ಪ್ರದೇಶದ ಮಹಾರಾಜಗಂಜ್ ಜಿಲ್ಲೆಯವರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಹಲವಾರು ಕಾರ್ಮಿಕರು ಸಿಲುಕಿರಬಹುದಾದ ಶಂಕೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಾರ್ಯ ಚುರುಕುಗೊಳಿಸಲು ಸೂಚಿಸಿದ್ದು, ಈಗಾಗಲೇ ಚಾಮರಾಜನಗರ, ನಂಜನಗೂಡು,ಮೈಸೂರು ಅಗ್ನಿಶಾಮಕ ದಳ ಸಿಬ್ಬಂದಿ, ಬೆಂಗಳೂರಿನ NDRF ತಂಡಗಳ 50 ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಮಿಕರ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಗಣಿ ಗುತ್ತಿಗೆ ಪಡೆದಿದ್ದ ಮಹೇಂದ್ರಪ್ಪ, ಉಪಗುತ್ತಿಗೆ ಪಡೆದಿದ್ದ ಹಕೀಂ, ಗಣಿ ನೋಡಿಕೊಳ್ಳುತ್ತಿದ್ದ ನವೀದ್ ಎಂಬವರ ವಿರುದ್ಧ ಗಣಿ ಕುಸಿತ ಪ್ರಕರಣ, ಗಣಿ,ಭೂ ವಿಜ್ಞಾನ ಇಲಾಖೆಯಿಂದ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಈಗಾಗಲೇ ನವೀದ್ ರನ್ನು ಬಂಧಿಸಿರುವ ಪೊಲೀಸರು ಮಹೇಂದ್ರಪ್ಪ ಮತ್ತು ಹಕೀಂ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗಳನ್ನು ಬಂದ್ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರು.

ಮಾದ್ಯಮದವರೊಂದಿಗೆ ಮಾತನಾಡಿದ ಸಚಿವ ಸೋಮಣ್ಣ ‘ಅಕ್ರಮವಷ್ಟೆ ಅಲ್ಲ, ಸರ್ಕಾರ ನಿಗದಿಮಾಡಿದ ಸ್ಥಳದಲ್ಲಿ ಒಂದು ಚೂರು ಒತ್ತುವರಿ ಮಾಡಿದರೂ ಅನುಮತಿ ರದ್ದು ಮಾಡಲು ಸೂಚಿಸಲಾಗುವುದು’ ಎಂದು ಹೇಳಿದರು.

ಬೆಳಿಗ್ಗೆ 6.30ಗೆ ಕಾರ್ಯಾಚರಣೆ ಆರಂಭವಾಗಿದ್ದು ಎನ್ ಡಿಆರ್ ಎಫ್ ನ 20, ಎಸ್ ಡಿಆರ್ ಎಫ್ ನ 20 ಹಾಗೂ ಅಗ್ನಿಶಾಮಕ ದಳದ 15 ಮಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

Join Whatsapp