ಮಂಗಳೂರು: ಮಂಗಳೂರು ವಿವಿ ಉಪಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ, ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧ ಎಂಬ ಆದೇಶ ಹೊರಡಿಸಿದ ಕಾರಣದಿಂದಾಗಿ, ಕಾಲೇಜುಗಳ 16% ಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಟಿಸಿಗಳನ್ನು ಪಡೆಯಬೇಕಾಗಿ ಬಂದಿದೆ ಎಂಬ ವಿಚಾರ ಮಾಹಿತಿ ಹಕ್ಕಿನಡಿಯಲ್ಲಿ ಬಹಿರಂಗವಾಗಿದೆ.
ಆರ್ಟಿಐ ಅಡಿಯಲ್ಲಿ ದೊರಕಿದ ಮಾಹಿತಿ ಪ್ರಕಾರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸರ್ಕಾರಿ, ಅನುದಾನಿತ ಮತ್ತು ಘಟಕ ಕಾಲೇಜುಗಳಲ್ಲಿ, ಕಳೆದ ಎರಡು ವರ್ಷದಲ್ಲಿ ವಿವಿಧ ಕೋರ್ಸ್ ಗಳಿಗೆ ದಾಖಲಾದ ಒಟ್ಟು 900 ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ 145 ವಿದ್ಯಾರ್ಥಿನಿಯರು ಟಿಸಿಗಳನ್ನು ಪಡೆದುಕೊಂಡಿದ್ದಾರೆ.
ಮಂಗಳೂರು ಕಾರ್ಸ್ಟ್ರೀಟ್ ನ ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಿಜಾಬ್ ವಿಚಾರವಾಗಿ ಎಬಿವಿಪಿ ಗೂಂಡಾಗಳ ಕಿರುಕುಳ ಹೆಚ್ಚಾಗಿದ್ದು ,51 ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ 35 ವಿದ್ಯಾರ್ಥಿನಿಯರು ತಮ್ಮ ಟಿಸಿಯನ್ನು ಸಂಗ್ರಹಿಸಿದ್ದಾರೆ.
ಹಳೇಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ, ಮೂರು ಮತ್ತು ನಾಲ್ಕನೇ ಸೆಮಿಸ್ಟರ್ ತರಗತಿಗಳಿಗೆ ಹಾಜರಾಗಿದ್ದ 20 ವಿದ್ಯಾರ್ಥಿನಿಯರು ದ್ವಿತೀಯ, ನಾಲ್ಕನೇ ಮತ್ತು ಆರನೇ ಸೆಮಿಸ್ಟರ್ ಗಳಲ್ಲಿ ಟಿಸಿಗಳನ್ನು ಸಂಗ್ರಹಿಸಿದ್ದಾರೆ.
ಹಿಜಾಬ್ ವಿವಾದ ಪ್ರಾರಂಭವಾದ ಅಜ್ಜರಕಾಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಡುಪಿ ಜಿಲ್ಲೆಯ ಸರ್ಕಾರಿ ಕಾಲೇಜುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಒಂಬತ್ತು ವಿದ್ಯಾರ್ಥಿಗಳು ತಮ್ಮ ಟಿಸಿಯನ್ನು ಸಂಗ್ರಹಿಸಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 39 ಸರ್ಕಾರಿ, 36 ಅನುದಾನಿತ ಕಾಲೇಜುಗಳಿವೆ. ದಕ್ಷಿಣ ಕನ್ನಡ ಜಿಲ್ಲೆಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ವರ್ಗಾವಣೆ ಕೋರಿದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ.
ಉಜಿರೆಯ ಎಸ್ಡಿಎಂ ಕಾಲೇಜು (11) ಮತ್ತು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು (13) ಮುಸ್ಲಿಂ ವಿದ್ಯಾರ್ಥಿನಿಯರು ಟಿಸಿಗಳನ್ನು ಸಂಗ್ರಹಿಸಿದ್ದಾರೆ
ಟಿಸಿ ಪಡೆದ ಕಾರಣವನ್ನು ಪ್ರಶ್ನಿಸಿದಾಗ, ಎಬಿವಿಪಿಯಲ್ಲಿ ಗುರುತಿಸಿಕೊಂಡ ಕೆಲ ವಿದ್ಯಾರ್ಥಿಗಳ ಕಿರುಕುಳಕ್ಕೆ ಆಡಳಿತ ವರ್ಗವೂ ಸಾಥ್ ನೀಡುವುದರಿಂದಾಗಿ ಟಿಸಿ ಪಡೆಯಬೇಕಾಯಿತು ಎಂದು ವಿದ್ಯಾರ್ಥಿನಿಗಳು ತಿಳಿಸಿದ್ದಾರೆ. ಸರಕಾರ ಏಕಪಂಥೀಯವಾಗಿ ಹೊರಡಿಸಿದ ಆದೇಶದ ಕಾರಣ ಮುಸ್ಲಿಂ ವಿದ್ಯಾರ್ಥಿನಿಯರು ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಬೇಕಾಗಿ ಎಂಬ ಮಾತು ಸಾರ್ವಜನಿಕ ವಲಯಗಳಲ್ಲಿ ಕೇಳಿಬರುತ್ತಿದೆ.