‘ಹಿಜಾಬ್’ ವಿಚಾರಣೆಗೆ ಮೂವರು ನ್ಯಾಯಮೂರ್ತಿಗಳ ವಿಶೇಷ ಪೀಠ ರಚನೆ; ಗುರುವಾರ ಮಧ್ಯಾಹ್ನ 2.30ಕ್ಕೆ ವಿಚಾರಣೆ

Prasthutha|

ಬೆಂಗಳೂರು: ಕರ್ನಾಟಕದ ಕೆಲ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಸಲ್ಲಿಸಿರುವ ಏಳು ಪ್ರತ್ಯೇಕ ಅರ್ಜಿಗಳ ಕುರಿತು ವಿಸ್ತೃತ ವಿಚಾರಣೆ ನಡೆಸಲು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ
ಮೂವರು ನ್ಯಾಯಮೂರ್ತಿಗಳ ವಿಶೇಷ ಪೀಠ ರಚಿಸಲಾಗಿದೆ.
ನ್ಯಾಯಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್, ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದು, ಫೆ.10ರಂದು ಮಧ್ಯಾಹ್ನ 2.30ಕ್ಕೆ ವಿಶೇಷ ನ್ಯಾಯಪೀಠದೆದುರು ಅರ್ಜಿಯ ವಿಚಾರಣೆ ನಡೆಯಲಿದೆ.

- Advertisement -

ಇದಕ್ಕೂ ಮೊದಲು ಮಂಗಳವಾರ ಹಾಗೂ ಬುಧವಾರ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ, ಪ್ರಕರಣವನ್ನು ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸುವ ಬಗ್ಗೆ ಅರ್ಜಿದಾರರು ಮತ್ತು ಸರಕಾರದ ಅಭಿಪ್ರಾಯ ಏನು ಎಂದು ಪ್ರಶ್ನಿಸಿದ್ದರು.

ಅರ್ಜಿದಾರರ ಪರ ವಕೀಲರಾದ ಸುಪ್ರೀಂ ಕೋರ್ಟ್’ನ ಹಿರಿಯ ನ್ಯಾಯವಾದಿ ಸಂಜಯ್ ಹೆಗ್ಡೆ, ವಕೀಲರಾದ ದೇವದಾಸ್ ಕಾಮತ್, ಕಾಳೀಶ್ವರಮ್ ರಾಜ್ ಹಾಗೂ ಮುಹಮ್ಮದ್ ತಾಹಿರ್ ಮಧ್ಯಂತರ ಆದೇಶ ನೀಡಲು ವಿನಂತಿಸಿದ್ದರು. ಆದರೆ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ನ್ಯಾಯಪೀಠ ಯಾವುದೇ ಮಧ್ಯಂತರ ಆದೇಶ ನೀಡಬಾರದು ಎಂದು ವಿನಂತಿಸಿದ್ದರು.
ಎಲ್ಲರ ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾ. ಕೃಷ್ಣ ಎಸ್ ದೀಕ್ಷಿತ್ , ಇದು ಅತ್ಯಂತ ಸೂಕ್ಷ್ಮ ವಿಚಾರ, ಇದರಲ್ಲಿ ಅನೇಕ ಸಾಂವಿಧಾನಿಕ ಹಾಗೂ ಕಾನೂನಾತ್ಮಕ ಅಂಶಗಳಿವೆ. ಜೊತೆಗೆ ವೈಯಕ್ತಿಕ ಕಾನೂನು ಮತ್ತು ಹಕ್ಕುಗಳ ವಿಚಾರವಿದೆ. ಹಾಗಾಗಿ ಆ ಕುರಿತು ವಿಸ್ತೃತ ವಿಚಾರಣೆ ಅಗತ್ಯವಿರುವುದರಿಂದ ಪ್ರಕರಣವನ್ನು ಸಿಜೆ ಅವರಿಗೆ ವರ್ಗಾಯಿಸುತ್ತಿದ್ದೇನೆ. ಅವರೇ ವಿಸ್ತೃತ ಪೀಠ ರಚನೆ ಬಗ್ಗೆ ತೀರ್ಮಾನಿಸಲಿ ಎಂದು ಆದೇಶ ನೀಡಿಿಿದ್ದರು

- Advertisement -

Join Whatsapp