ಹೆದ್ದಾರಿ ಕುಸಿತ: ಮೊದಲೇ ವಿಳಂಬವಾಗಿರುವ ಕಾಮಗಾರಿಗೆ ಮತ್ತೊಂದು ವಿಘ್ನ!

Prasthutha|

►ಹಾಸನ-ಮಂಗಳೂರು ರಸ್ತೆಯ ಬಾಳ್ಳುಪೇಟೆ ಸಮೀಪ ಕುಸಿದ ಬೈಪಾಸ್ ರಸ್ತೆ

- Advertisement -

ಸಕಲೇಶಪುರ: ತಾಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆ, ಕೆಲವು ಕಡೆಗಳಲ್ಲಿ ದೊಡ್ಡ ಅವಾಂತರ ಸೃಷ್ಟಿ ಮಾಡಿದೆ.

ತಾಲೂಕಿನ ಬಾಳ್ಳುಪೇಟೆ ಸಮೀಪ, ಭಾರೀ ಮಳೆಯಿಂದಾಗಿ ನಿರ್ಮಾಣ ಹಂತದಲ್ಲಿದ್ದ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯ ಒಂದು ಭಾಗ ಸುಮಾರು 100 ಮೀಟರ್ ಕುಸಿದಿದೆ.

- Advertisement -

ಹಾಸನದಿಂದ ತಾಲೂಕಿನ ಮಾರನಹಳ್ಳಿವರೆಗೆ ನಡೆಯುತ್ತಿರುವ ಚತುಷ್ಪಥ ಹೆದ್ದಾರಿ ಕಾಮಗಾರಿ ಮೊದಲೇ ವಿಳಂಬವಾಗಿ, ಕುಟುಂತ್ತಾ ಸಾಗಿದೆ ಎಂಬ ಆರೋಪ, ಆಕ್ರೋಶ ನಡುವೆಯೇ ಇದೀಗ ಹೆದ್ದಾರಿ ಕುಸಿದಿರುವುದು ದೊಡ್ಡ ವಿಘ್ನ ತಂದೊಡ್ಡಿದೆ. ಮೊದಲ ಮಳೆಗೇ ಹೀಗಾದರೆ ಮುಂದಿನ ದಿನಗಳಲ್ಲಿ ಮಳೆ ಜೋರಾದರೆ ಬೇರೆ ಯಾವ ರೀತಿಯ ಅನಾಹುತ ಘಟಿಸುವುದೋ ಗೊತ್ತಿಲ್ಲ ಎಂಬುದು ಸ್ಥಳೀಯರು, ಅಧಿಕಾರಿಗಳ ಆತಂಕವಾಗಿದೆ. ಒಂದು ವೇಳೆ ಮಳೆ ಜೋರಾದರೆ ಸಂಪೂರ್ಣ ರಸ್ತೆ ಕುಸಿಯುವ ಇಲ್ಲವೇ ಕೊಚ್ಚಿ ಹೋಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ, ನಿತ್ಯ ಸಾವಿರಾರು ವಾಹನ ಓಡಾಡೋ ಹೆದ್ದಾರಿಯಲ್ಲಿ ಆತಂಕ ಸೃಷ್ಟಿಯಾಗಿದೆ.

ಹೆದ್ದಾರಿ ಹಂತ ಹಂತವಾಗಿ ಕುಸಿಯುತ್ತಿರುವುದಕ್ಕೆ ಕಳಪೆ ಕಾಮಗಾರಿಯೂ ಕಾರಣ ಎಂಬ ಆರೋಪ ಕೇಳಿ ಬಂದಿದೆ. ನೂರಾರು ಕೋಟಿ ರೂ.ವೆಚ್ಚದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಮಾಡಲಾಗುತ್ತಿದೆ. ಆದರೆ ಅದು ಗುಣಮಟ್ಟದಿಂದ ಕೂಡಿಲ್ಲ. ಹೀಗಾಗಿ ಅಲ್ಲಲ್ಲಿ ಕುಸಿದು ದೊಡ್ಡ ಮಟ್ಟದ ಹಣ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

ಮತ್ತೊಂದೆಡೆ ವಿಳಂಬ ದೂರಿನಿಂದ ತಪ್ಪಿಸಿಕೊಳ್ಳಲು ಅವೈಜ್ಞಾನಿಕವಾಗಿ ತರಾತುರಿಯಲ್ಲಿ ಕಾಮಗಾರಿ ಮಾಡುತ್ತಿರುವುದರಿಂದಲೂ ಓಡಾಡುವ ಮುನ್ನವೇ ರಸ್ತೆ ಕುಸಿಯಲು ಕಾರಣವಾಗಿದೆ ಎಂಬ ದೂರೂ ಕೇಳಿ ಬಂದಿದೆ.

ಈ ಎಲ್ಲವನ್ನೂ ಗಮನಿಸಿದರೆ, ಕಳೆದ ಹಲವು ವರ್ಷಗಳಿಂದ ಕುಟುಂತ್ತಾ ಸಾಗಿರುವ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಮತ್ತೆ ಗ್ರಹಣ ಹಿಡಿಯುವ ಮುನ್ಸೂಚನೆ ಎದುರಾಗಿದೆ. ಕುಸಿತ ಒಂದು ಕಡೆಯಾದರೆ, ಮಳೆ ಜೋರಾದರೆ ಕಾಮಗಾರಿ ಸ್ಥಗಿತವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ನಿನ್ನೆಯಷ್ಟೇ ಕೇಂದ್ರ ಸಚಿವ ಕೃಶನ್ ಪಾಲ್ ಗುರ್ಜರ್, ಅಧಿಕಾರಿಗಳೊಂದಿಗೆ ಹೆದ್ದಾರಿ ಕಾಮಗಾರಿ ವೀಕ್ಷಣೆ ಮಾಡಿ, ಶೀಘ್ರವೇ ಕಾಮಗಾರಿ ಮುಗಿಸಬೇಕು, ಜೊತೆಗೆ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿದ್ದರು. ಈ ವೇಳೆ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗಾರರ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದರು.

ಸಾರ್ವಜನಿಕರ ಹಣ ಪೋಲಾಗುತ್ತಿದ್ದೆಯೇ ಹೊರತು ಉತ್ತಮ ರೀತಿಯಲ್ಲಿ ಕೆಲಸ ಆಗುತ್ತಿಲ್ಲ ಎಂದು ದೂರಿದ್ದರು.

ಮತ್ತೊಂದು ತಾಲೂಕಿನ ಬಿಸಲೇಘಾಟ್ ಬಳಿ ಜೋರು ಮಳೆಯಿಂದ ರಸ್ತೆ ಮರ ಮುರಿದು ರಸ್ತೆಗೆ ಉರುಳಿದ ಪರಿಣಾಮ ಕೆಲಹೊತ್ತು ಸಂಚಾರ ಅಸ್ತವ್ಯಸ್ತವಾಗಿತ್ತು.

ಕಳೆದ ರಾತ್ರಿಯೇ ಭಾರೀ ಗಾತ್ರದ ಮರ, ಬುಡಮೇಲಾಗಿ ರಸ್ತೆಗೆ ಅಡಲಾಗಿ ಬಿದ್ದಿತ್ತು. ಇದರ ಮುನ್ಸೂಚನೆ ಇಲ್ಲದೆ ವಾಹನ ಸವಾರರು ಈ ಮಾರ್ಗವಾಗಿ ಬಂದಿದ್ದರು. ಆದರೂ ಯಾವುದೇ ಕಡೆ ಹೋಗಲಾಗದೆ, ಮುಂಜಾನೆ 5 ಗಂಟೆಯಿಂದ ಸತತ ನಾಲ್ಕು ಗಂಟೆ ಕಾಲ ಕುಕ್ಕೆ ಸುಬ್ರಹ್ಮಣ್ಯ ಮತ್ತು ಸಕಲೇಶಪುರ ನಡುವಿನ ಮಾರ್ಗ ತಾತ್ಕಾಲಿಕವಾಗಿ ಬಂದ್ ಆಗಿತ್ತು. ಎಲ್ಲಾ ರೀತಿಯ ವಾಹನಗಳು ನಿಂತಲ್ಲೇ ನಿಲ್ಲಬೇಕಾಯಿತು. ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.

ಕಡೆಗೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ತ್ವರಿತ ಕಾರ್ಯಾಚರಣೆ ನಡೆಸಿ ಮರ ತೆರವು ಗೊಳಿಸಿದ ನಂತರ ಸಂಚಾರ ಪುನಾರಂಭವಾಯಿತು. ಇದೇ ರೀತಿ, ಆಲೂರು, ಬೇಲೂರು, ಅರಕಲಗೂಡು ತಾಲೂಕುಗಳಲ್ಲೂ ಮಳೆ ಅಬ್ಬರಿಸುತ್ತಿದೆ. ಮುನ್ನೆಚ್ಚರಿಕೆಯಾಗಿ ಸಕಲೇಶಪುರ, ಆಲೂರು ಮತ್ತು ಅರಕಲಗೂಡು ತಾಲೂಕುಗಳ ಶಾಲೆ ಮತ್ತು ಅಂಗನವಾಡಿಗಳಿಗೆ ಜಿಲ್ಲಾಧಿಕಾರಿ ಆರ್.ಗಿರೀಶ್ ಇಂದು ರಜೆ ಘೋಷಣೆ ಮಾಡಿದ್ದಾರೆ.

Join Whatsapp