ಬೆಂಗಳೂರು : ಬೆಂಗಳೂರು ಗಲಭೆಗೆ ಸಂಬಂಧಿಸಿ ಬಂಧಿತರಾದವರು ಮತ್ತು ಬಂಧಿಸಿದ ಪೊಲೀಸ್ ಅಧಿಕಾರಿ ಸಿಬ್ಬಂದಿಯ ಹೆಸರು ಬಹಿರಂಗ ಪಡಿಸುವಂತೆ ಕೋರಿದ ಅರ್ಜಿಯೊಂದಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಅಪರಾಧ ದಂಡ ಸಂಹಿತೆಯ ಕಲಂ 41ಸಿ ಅನ್ವಯ ಬಂಧಿತರಾದವರ ಹೆಸರು ಮತ್ತು ವಿಳಾಸ ಹಾಗೂ ಬಂಧಿಸಿದ ಪೊಲೀಸ್ ಸಿಬ್ಬಂದಿಯ ಹುದ್ದೆ ಮತ್ತು ಹೆಸರು ಬಹಿರಂಗ ಪಡಿಸುವಂತೆ ಕೋರಿ ಅರ್ಜಿಯೊಂದು ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದೆ.
ನ್ಯಾ. ಅಭಯ್ ಒಕಾ ಮತ್ತು ನ್ಯಾ. ಅಶೋಕ್ ಎಸ್. ಕಿನಗಿ ಅವರ ನ್ಯಾಯಪೀಠ ನೋಟಿಸ್ ಜಾರಿಗೊಳಿಸಿದ್ದು, ಮುಂದಿನ ವಿಚಾರಣೆ ಸೆ.11ಕ್ಕೆ ಮುಂದೂಡಿದೆ.
ಆ.11ರ ಬೆಂಗಳೂರು ಗಲಭೆ ಬಳಿಕ ತಮಗೆ ಅನೇಕ ಜನ ಕರೆ ಮಾಡಿ, ತಮ್ಮ ಕುಟುಂಬದ ಹುಡುಗರನ್ನು ಬಂಧಿಸಿದ್ದಾರೆ ಮತ್ತು ಅವರ ಬಗ್ಗೆ ಯಾವುದೇ ಸುಳಿವು ಲಭ್ಯವಾಗುತ್ತಿಲ್ಲ ಎಂಬುದಾಗಿ ಕೇಳುತ್ತಿದ್ದಾರೆ ಎಂದು ಈ ಅರ್ಜಿ ಸಲ್ಲಿಸಿರುವ ಅರ್ಜಿದಾರ, ನ್ಯಾಯವಾದಿ ಜುನೈದ್ ಅಹ್ಮದ್ ತಿಳಿಸಿದ್ದಾರೆ.
ತಾವು ಸ್ಥಳೀಯ ಪೊಲೀಸ್ ಠಾಣೆಗಳಿಗೆ ತೆರಳಿ, ಕರೆ ಮಾಡಿದವರ ಮನೆಯ ಪುರುಷರ ವಿವರ ಸಂಗ್ರಹಿಸಲು ಯತ್ನಿಸಿದೆ. ಆದರೆ, ಠಾಣೆಗಳಲ್ಲಿ ಆ ಕುರಿತ ವಿವರಗಳಿಲ್ಲ. ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದಾಗ, ಅಲ್ಲಿ ಬಂಧಿತರಾದವರ ಹೆಸರುಳ್ಳ ನೋಟಿಸ್ ಬೋರ್ಡ್ ನೋಡುವಂತೆ ಸೂಚಿಸಿದರು. ಅಲ್ಲಿಯೂ ಸೂಕ್ತ ಮಾಹಿತಿ ಲಭ್ಯವಾಗಲಿಲ್ಲ ಎಂದು ಜುನೈದ್ ಹೇಳಿದ್ದಾರೆ.
ಕಲಂ 41ಸಿ ಕುರಿತು ಕೋರ್ಟ್ ಗೆ ಮನವರಿಕೆ ಮಾಡಲು ಅರ್ಜಿದಾರರ ಪರ ನ್ಯಾಯವಾದಿ ಸಯ್ಯದ್ ಝಹೀರುದ್ದೀನ್ ಬರೀದ್ ಪ್ರಯತ್ನಿಸಿದರು. ನಗರ ಪೊಲೀಸರ ವೆಬ್ ಸೈಟ್ ನಲ್ಲಿ ಬಂಧಿತರ ವಿವರ ಪ್ರಕಟಿಸುವಂತೆ ಇತ್ತೀಚೆಗೆ ಕೋರಲಾಗಿದ್ದ ಅರ್ಜಿಯೊಂದನ್ನು ಹೈಕೋರ್ಟ್ ತಿರಸ್ಕರಿಸಿತ್ತು. “ಆರೋಪಿಗಳ ವಿವರ ವೆಬ್ ಸೈಟ್ ನಲ್ಲಿ ಪ್ರಕಟಿಸುವಂತೆ ನಾವು ಸೂಚಿಸಿದರೆ, ಜನರು ಇಲ್ಲಿಗೆ (ಹೈಕೋರ್ಟ್ ಗೆ) ಬಂದು, ನಮ್ಮ ಖಾಸಗಿತನ ಉಲ್ಲಂಘನೆಯಾಗಿದೆ ಎನ್ನುತ್ತಾರೆ’’ ಎಂದು ಆಗ ಕೋರ್ಟ್ ಹೇಳಿತ್ತು.
ಆ.11ರಂದು ರಾತ್ರಿ ಪ್ರವಾದಿ ಮುಹಮ್ಮದರ ಕುರಿತು ಅವಹೇಳನಕಾರಿ ಫೇಸ್ ಬುಕ್ ಪೋಸ್ಟ್ ಮಾಡಿದ್ದ ವ್ಯಕ್ತಿಯೊಬ್ಬನ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ವಿಳಂಬ ನೀತಿ ಅನುಸರಿಸಿದುದರಿಂದ, ಆಕ್ರೋಶಿತ ಜನರ ಸಮೂಹವು ಬೆಂಗಳೂರಿನಲ್ಲಿ ಹಿಂಸಾಚಾರ ನಡೆಸಿತ್ತು.