ಸಿಎಂ ಯಾರು ಆಗಬೇಕು ಎಂಬುವುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತೆ: ಡಿ ಕೆ ಶಿವಕುಮಾರ್

Prasthutha|

ಹುಬ್ಬಳ್ಳಿ: ಸಿಎಂ ನಾನು ಆಗೋದಲ್ಲ, ಯಾರು ಆಗಬೇಕು ಅನ್ನೋದು ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್, ಸೋನಿಯಾ ಗಾಂಧಿ ತೀರ್ಮಾನ ಮಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

- Advertisement -


ಈ ಬಗ್ಗೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸುಳ್ಳಿನ ಯೂನಿವರ್ಸಿಟಿ. ಮಹಾರಾಷ್ಟ್ರ, ಗೋವಾ, ಕರ್ನಾಟಕ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳೇ ಅಧಿಕಾರದಲ್ಲಿವೆ. ಕಳೆದ ಮೂರುವರೆ ವರ್ಷಗಳಿಂದ ಏನನ್ನೂ ಮಾಡದ ಬಿಜೆಪಿ ಈಗ ನಾವು ಜನರಪರ ಧ್ವನಿ ಎತ್ತುತ್ತೇವೆ ಎಂದು ಹೇಳಿದ ಬಳಿಕ ಡಿಪಿಆರ್ ಒಪ್ಪಿಗೆ ಪಡೆದಿದ್ದೇವೆ ಎಂದು ಹೇಳುತ್ತಿದ್ದಾರೆ. ಎಸ್.ಎಂ. ಕೃಷ್ಣಾ ಅವರ ಕಾಲದಲ್ಲಿ ಈ ಯೋಜನೆ ಆರಂಭಿಸಲು ತೀರ್ಮಾನಿಸಲಾಯಿತು. ಆಗ ಹೆಚ್.ಕೆ. ಪಾಟೀಲರು ನೀರಾವರಿ ಸಚಿವರಾಗಿದ್ದರು. ಆದರೆ ಕಾನೂನು ಸಮರದಿಂದ ನ್ಯಾಯಾಧಿಕರಣಕ್ಕೆ ಈ ವಿಚಾರ ಹೋಗಿ 2018 ರಲ್ಲಿ ಈ ವಿಚಾರವಾಗಿ ತೀರ್ಪು ಬಂದಿದೆ. ತೀರ್ಪು ಬಂದ ಬಳಿಕ ಅಗತ್ಯ ಅನುಮತಿ ಪಡೆದು ಯೋಜನೆ ಜಾರಿಗೊಳಿಸದೇ, ಈಗ ಡಿಪಿಆರ್ ಗೆ ಒಪ್ಪಿಗೆ ನೀಡಿ ದಿನಾಂಕವೇ ಇಲ್ಲದ ಆದೇಶ ಹೊರಡಿಸಿದ್ದಾರೆ. ಈ ಅನುಮತಿ ಪತ್ರದಲ್ಲೂ ಸುಪ್ರೀಂ ಕೋರ್ಟ್ ತೀರ್ಮಾನ ಎಂದು ಹೇಳಲಾಗಿದೆ.

ಸುಪ್ರೀಂ ಕೋರ್ಟ್ ನಲ್ಲಿ ಯಾರು ಕೇಸ್ ಹಾಕಿದ್ದಾರೋ ಅವರಿಂದ ವಾಪಸ್ ತೆಗೆಸಿ ಈ ಯೋಜನೆ ಜಾರಿಗೆ ತರಬಹುದಾಗಿತ್ತಲ್ಲವೇ? ಅವರ ಮಂತ್ರಿ ರಾಜೀನಾಮೆ ನೀಡುವುದಾಗಿ ಹೇಳಿದ್ದಾರಂತೆ. ಅವರು ರಾಜೀನಾಮೆ ನೀಡಲಿ ಯಾರು ಬೇಡ ಎಂದವರು ಎಂದು ಪ್ರಶ್ನಿಸಿದ್ದಾರೆ.

- Advertisement -

ರಾಜ್ಯದಲ್ಲಿ ಬಿಜೆಪಿ ಪರವಾಗಿ 26 ಮಂದಿ ಸಂಸದರಿದ್ದಾರೆ. 26 ಸಂಸದರು ಇದ್ದರೂ ಪ್ರಧಾನಮಂತ್ರಿಗಳ ಬಳಿ ಈ ವಿಚಾರವಾಗಿ ಚರ್ಚೆ ಮಾಡದೇ, ಇರುವ ಅಡೆತಡೆಗಳನ್ನು ನಿವಾರಿಸಿ ಕೆಲಸ ಆರಂಭಿಸದೇ, ಬರೀ ಖಾಲಿ ಮಾತುಗಳನ್ನಾಡುತ್ತಿದ್ದಾರೆ. ಆಕ್ಷೇಪಣಾ ಅರ್ಜಿ ಹೊರತುಪಡಿಸಿ ಯೋಜನೆಯ ಉಳಿದ ಕೆಲಸಗಳನ್ನು ಆರಂಭಿಸಬಹುದಲ್ಲವೇ? ನಿಮ್ಮ ರಾಜ್ಯದಲ್ಲಿ ನಿಮ್ಮ ಹಣದಲ್ಲಿ ಕೆಲಸ ಮಾಡಲು ಯಾರು ತಡೆಯುತ್ತಾರೆ. ನೀರು ತರುವ ಸ್ಥಳ ಹೊರತುಪಡಿಸಿ ಉಳಿದ ಎಲ್ಲ ಕೆಲಸಗಳನ್ನು ಮಾಡಿಕೊಳ್ಳಬಹುದಲ್ಲವೇ? ಚುನಾವಣೆ ಬಂತು, ನಾವು ಧ್ವನಿ ಎತ್ತುತ್ತೇವೆ ಎಂಬ ಕಾರಣಕ್ಕೆ ಈ ರೀತಿ ಸುಳ್ಳು ಹೇಳಿದರೆ ಹೇಗೆ ಎಂದರು.

ಮೀಸಲಾತಿ ವಿಚಾರದಲ್ಲೂ ಇದೇ ರೀತಿ ಸುಳ್ಳು ಹೇಳುತ್ತಿದ್ದಾರೆ. ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳು ಹೇಳಿದಂತೆ ತಲೆಗೆ ತುಪ್ಪ ಸವರಿದರೆ ನಾಲಿಗೆಯಿಂದ ಅದರ ರುಚಿಯು ಸವಿಯಲು ಸಾಧ್ಯವಿಲ್ಲ, ಮೂಗಿನಿಂದ ಅದರ ಸುವಾಸನೆಯನ್ನೂ ಗ್ರಹಿಸಲು ಸಾಧ್ಯವಿಲ್ಲ. ಹೀಗೆ ಪಂಚಮಸಾಲಿಗಳು ಹಾಗೂ ಒಕ್ಕಲಿಗರ ತಲೆಗೆ ತುಪ್ಪ ಸವರಿದ್ದಾರೆ. ನಿಮ್ಮ ಕೈಯಲ್ಲಿ ಸಾಧ್ಯವಿದ್ದರೆ ಮಾಡುತ್ತೇವೆ ಎಂದು ಹೇಳಿ, ಆಗದಿದ್ದರೆ ಆಗುವುದಿಲ್ಲ ಎಂದು ಹೇಳಿ. ಸುಮ್ಮನೆ ಜನರನ್ನು ತಪ್ಪುದಾರಿಗೆಳೆದು ಬೊಮ್ಮಾಯಿ ಅವರು ಯಾಕೆ ಗೊಂದಲ ಸೃಷ್ಟಿಸುತ್ತಿದ್ದಾರೆ? ಈ ಬಗ್ಗೆ ನಾವು ಅಧ್ಯಯನ ಮಾಡಿದ್ದೇವೆ. ಆರ್ಥಿಕ ದುರ್ಬಲ ವರ್ಗದವರಿಗೆ ನೀಡಲಾಗಿರುವ ಶೇ.10 ರಷ್ಟು ಮೀಸಲಾತಿ ಶ್ರೇಣಿಯನ್ನು ಮುಟ್ಟಲು ಸಾಧ್ಯವೇ ಇಲ್ಲ. ಅದೆಲ್ಲಿಂದ ತೆಗೆದು, ಎಲ್ಲಿಗೆ ಹೇಗೆ ಸೇರಿಸಿದ್ದೀರಿ? ಉದ್ಯೋಗ ನೇಮಕಾತಿಗೆ ಅದಿಸೂಚನೆ ಹೊರಡಿಸಲು ಸಂಪುಟ ಸಭೆಯಲ್ಲಿ ತೀರ್ಮಾನ ಎಂದು ಹೇಳುತ್ತಿದ್ದೀರಿ. ಈ ವಿಚಾರ ಇಟ್ಟುಕೊಂಡು, ನಮಗೆ ಇದರಿಂದ ಅನ್ಯಾಯವಾಗಿದೆ ಎಂದು ಯಾರಾದರೂ ನ್ಯಾಯಾಲಯದ ಮೊರೆ ಹೋಗುತ್ತಾರೆ. ಪರಿಶಿಷ್ಟ ಜಾತಿ ಹಾಗೂ ಪಂಗಡವರಿಗೆ ಹೆಚ್ಚಿಸಲಾಗಿರುವ ಮೀಸಲಾತಿ ಬಗ್ಗೆ ಸಂಸತ್ತಿಗೆ ಪ್ರಸ್ತಾವನೆ ಸಲ್ಲಿಸಿ, ಸಂವಿಧಾನದ 9 ನೇ ಶೆಡ್ಯೂಲ್ ನಲ್ಲಿ ಸೇರಿಸಬೇಕಿತ್ತು. ಆದರೆ ರಾಜ್ಯ ಸರ್ಕಾರ ಈ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಿಯೇ ಇಲ್ಲ.

ಉದ್ಯಮಿ ಪ್ರದೀಪ್ ಎಂಬುವವರು ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪ್ರಶ್ನೆ ಕೇಳಿದಾಗ, ‘ಎಫ್ ಐಆರ್ ಆಗಿದ್ದು, ಕಾನೂನು ಪ್ರಕಾರ ಯಾವ ಕ್ರಮ ಕೈಗೊಳ್ಳಬೇಕೋ ಕೈಗೊಳ್ಳಲಿ. ಆದರೆ ಅವರು ಆದಷ್ಟು ಬೇಗ ಬಿ ರಿಪೋರ್ಟ್ ಕೂಡ ಬರೆಯುತ್ತಾರೆ. ಬಿಜೆಪಿ ಸರ್ಕಾರ ಎಂತೆಂಥಹ ಸಚಿವರುಗಳಿಗೇ ಬಿ ರಿಪೋರ್ಟ್ ಬರೆದಿದ್ದು, ಲಿಂಬಾವಳಿ ಅವರ ಪ್ರಕರಣದಲ್ಲೂ ಬರೆಯುತ್ತಾರೆ. ಅದು ನಮಗೆ ಗೊತ್ತಿದೆ’ ಎಂದರು.



Join Whatsapp