ಬೆಂಗಳೂರು: ನಾನು ಅಧ್ಯಕ್ಷೆಯಾಗಿ ಇರಬೇಕಾ, ಬೇಡವಾ ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿದ್ದಾರೆ.
ಕಾಂಗ್ರೆಸ್ ಮಹಿಳಾ ಘಟಕದ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆಗಾಗಿಯೇ ಕೆಲವು ಬದಲಾವಣೆ ಮಾಡಲಾಗಿದೆ. ಎಲ್ಲಾ ನಾಯಕರ ಅನುಮತಿ ಪಡೆದು ನಿರ್ಧಾರ ಮಾಡಲಾಗಿದೆ. ರಾಮಲಿಂಗಾರೆಡ್ಡಿ ಅವರು ನಮ್ಮ ಇನ್ ಚಾರ್ಜ್. ಅವರ ಅನುಮತಿ ಪಡೆದು ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು.
ನಮ್ಮಲ್ಲಿ ಜಾತಿನೇ ಇಲ್ಲ. ನಮ್ಮ ಮನೆಯವರು ಬಂಟರು, ಈಗ ನಮ್ಮ ಕುಟುಂಬಕ್ಕೆ ಗೌಡ ಮನೆತನದಿಂದ ಮದುವೆ ಆಗುತ್ತಿದೆ. ನಾನು ಯಾವತ್ತೂ ಜಾತಿ ಇಟ್ಟುಕೊಂಡು ಕೆಲಸ ಮಾಡಿಲ್ಲ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಗಮನಕ್ಕೆ ಬಾರದೇ ಏನೂ ಆಗಲ್ಲ. ಅವರ ಅನುಮತಿ ಪಡೆದೇ ಎಲ್ಲಾ ಮಾಡಿದ್ದೇನೆ. ಕೆಲವರು ಪ್ರಚಾರಕ್ಕೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.
ತಮ್ಮ ವಿರುದ್ಧ ಪ್ರತಿಭಟನೆ ಮಾಡಿದವರ ವಿರುದ್ಧ ಅಸಮಾಧಾನ ಹೊರ ಹಾಕಿದ ಅವರು, ನಾನು ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದೇನೆ. ಚುನಾವಣೆ ವರ್ಷ ಆಗಿರುವುದರಿಂದ ನಾಯಕರ ಅನುಮತಿ ಪಡೆದೇ ಕೆಲವು ಬದಲಾವಣೆ ಮಾಡಿದ್ದೇವೆ ಎಂದು ಹೇಳಿದರು.