ವಿರಾಟ್ ಕೊಹ್ಲಿ ಕೊಠಡಿಯ ವಿಡಿಯೋ ಚಿತ್ರೀಕರಿಸಿದ ಸಿಬ್ಬಂದಿಯನ್ನು ಅಮಾನತುಗೊಳಿಸಿದ ಪರ್ತ್ ಹೋಟೆಲ್

Prasthutha|

ಕ್ಯಾನ್ ಬೆರಾ : ಟಿ-20 ವಿಶ್ವಕಪ್ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಪರ್ತ್ ಹೊಟೇಲ್ ವೊಂದರಲ್ಲಿ ತಂಗಿದ್ದ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಕೊಠಡಿಯ ವಿಡಿಯೋ ಚಿತ್ರೀಕರಿಸಿದ್ದಕಾಗಿ ಹೋಟೆಲ್ ಕ್ರೌನ್ ರೆಸಾರ್ಟ್ಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ,  ವಿರಾಟ್ ಕೊಹ್ಲಿ, ಭಾರತೀಯ ಕ್ರಿಕೆಟ್ ತಂಡ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನೊಂದಿಗೆ ಹೊಟೇಲ್ ಕ್ಷಮೆಯಾಚಿಸಿದೆ.

- Advertisement -

ಪರ್ತ್ ನ ಹೋಟೆಲ್ ಕೋಣೆಯಲ್ಲಿ ತಮ್ಮ ಖಾಸಗಿತನ ಉಲ್ಲಂಘನೆಯಾಗಿದೆ ಎಂದು ವಿರಾಟ್ ಕೊಹ್ಲಿ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ಹರಿಹಾಯ್ದಿದ್ದರು. ಅಲ್ಲದೆ, ತನ್ನ ಕೋಣೆಗೆ ನುಗ್ಗಿದ ವ್ಯಕ್ತಿಗಳು ಚಿತ್ರೀಕರಿಸಿದ ಆಘಾತಕಾರಿ ವೀಡಿಯೊವನ್ನು ಹಂಚಿಕೊಂಡಿದ್ದರು.

ಇನ್ಸ್ಟಾಗ್ರಾಮ್ ನಲ್ಲಿ ಕೊಹ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಕೊಹ್ಲಿ ಇಲ್ಲದಿದ್ದಾಗ ಅವರ ಕೊಠಡಿಯೊಳಗೆ ಯಾರೋ ಬಂದಿದ್ದು, ವಿಡಿಯೋ ಮಾಡಿದ್ದಾರೆ. ಕೊಹ್ಲಿಯ ಸೂಟ್ ಕೇಸ್, ಬಟ್ಟೆ ಇಡುವ ಸ್ಥಳ, ಶೂ, ಗ್ಲಾಸ್ ಗಳು  ಮತ್ತಿತರ ವಸ್ತುಗಳ ಸ್ಪಷ್ಟವಾಗಿ ಗೋಚರಿಸುತ್ತಿವೆ.

- Advertisement -

ಪ್ರತಿಯೊಬ್ಬರ ಖಾಸಗಿತನವನ್ನು ಗೌರವಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿರುವ ಕೊಹ್ಲಿ, ಅವರನ್ನು ಮನರಂಜನೆಯ ಸರಕನ್ನಾಗಿ ಉಪಚರಿಸದಂತೆ ಕೇಳಿಕೊಂಡಿದ್ದಾರೆ.

ಗೌಪ್ಯತೆ ಉಲ್ಲಂಘನೆಯ ವಿರುದ್ಧ ಹೋಟೆಲ್ ಆಡಳಿತ ಮಂಡಳಿಯು ಕ್ಷಮೆಯಾಚಿಸುವುದು ಮಾತ್ರವಲ್ಲದೆ ವಿರಾಟ್ ತಂಗಿರುವ ಕೋಣೆಯ ವೀಡಿಯೊವನ್ನು ಚಿತ್ರೀಕರಿಸಿದ ಸಿಬ್ಬಂದಿಯನ್ನು ಅಮಾನತುಗೊಳಿಸಿದೆ ಎಂದು ಕ್ರೌನ್ ರೆಸಾರ್ಟ್ಸ್ ತನ್ನ ಹೇಳೀಕೆಯಲ್ಲಿ ತಿಳಿಸಿದೆ. ಹಾಗೂ ಕೊಹ್ಲಿಯ ಹೋಟೆಲ್ ಕೋಣೆಯ ವೀಡಿಯೊವನ್ನು ಸಂಬಂಧಪಟ್ಟ ವ್ಯಕ್ತಿಗಳ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ನಿಂದ ತೆಗೆದುಹಾಕಲಾಗಿದೆ ಎಂದು ದೃಢಪಡಿಸಿದೆ.

Join Whatsapp