ಲಕ್ನೋ: ದೇಶದಲ್ಲಿರುವ ಮಸೀದಿಯಲ್ಲಿರುವ ಪರವಾನಿಗೆ ರಹಿತವಾಗಿ ಉಪಯೋಗಿಸುತ್ತಿರುವ ಮೈಕ್ ಗಳನ್ನು ಕಿತ್ತೆಸೆಯುತ್ತೇವೆ ಎಂದು ಉತ್ತರ ಪ್ರದೇಶದ ಡೊಮರಿಯಾಗಂಜ್ ಕ್ಷೇತ್ರದ ಶಾಸಕ ರಾಘವೇಂದ್ರ ಪ್ರತಾಪ್ ಸಿಂಗ್ ಪ್ರಚೋದನಾಕಾರಿಯಾಗಿ ಹೇಳಿಕೆ ನೀಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮುಸ್ಲಿಮರನ್ನು ಗುರಿಯಾಗಿಸಿ ಹರಾಮಿಗಳೇ ಎಂದು ತನ್ನ ಭಾಷಣವನ್ನು ಆರಂಭಿಸಿದ ಶಾಸಕ ರಾಘವೇಂದ್ರ ಪ್ರತಾಪ್ ಸಿಂಗ್, ಸ್ಥಳದಲ್ಲಿದ್ದ ಸಂಘಪರಿವಾರದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಾ ‘ನಾಳೆಯಿಂದ ಮಸೀದಿಯಲ್ಲಿ ಪರವಾನಿಗೆಯನ್ನು ಪರಿಶೀಲನೆ ನಡೆಸಿ, ಪರವಾನಿಗೆ ರಹಿತವಾಗಿ ಕಾರ್ಯಾಚರಿಸುವ ಮಸೀದಿಗಳ ಮೇಲಿನ ಮೈಕ್ ಗಳನ್ನು ಕಿತ್ತು ಬಿಸಾಡುತ್ತೇವೆ. ಹಿಂದೆ ಇಫ್ತಾರ್ ಸಂದರ್ಭದಲ್ಲಿ ಟೋಪಿ ಧರಿಸಿ ರಸ್ತೆಯನ್ನು ಬಂದ್ ಮಾಡಲಾಗುತ್ತಿತ್ತು. ಇದೀಗ ಈ ಪ್ರಕ್ರಿಯೆ ನಿಂತಿದ್ದು, ಮುಂದಿನ ದಿನಗಳಲ್ಲಿ ಟೋಪಿ ಬದಲು ಕೇಸರಿ ಶಾಲು ಮತ್ತು ತಿಲಕ ಧರಿಸುವಂತೆ ಮಾಡಲಾಗುವುದು’ ಎಂದು ಪ್ರಚೋದನಾಕಾರಿ ಮಾತನಾಡಿದ್ದಾರೆ.
ಮುಸ್ಲಿಮರನ್ನು ಗುರಿಯಾಗಿಸಿ ಧ್ವೇಷ ಭಾಷಣ ಮಾಡುತ್ತಿರುವ ವೇಳೆ ಪಕ್ಕದ ಮಸೀದಿಯಿಂದ ಆಝಾನ್ ಮೊಳಗುತ್ತಿದ್ದು, ಸಂಘಪರಿವಾರದ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಕೂಗುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
ಈ ಮಧ್ಯೆ ಎರಡು ದಿನಗಳ ಹಿಂದೆ ಫೇಸ್ ಬುಕ್ ನಲ್ಲಿ ಆತನ ಮತ್ತೊಂದು ಅಪ್ಲೋಡ್ ಮಾಡಲಾಗಿದ್ದು, ‘ನೀವು ಮತ್ತೆ ನನ್ನನ್ನು ಶಾಸಕನಾಗಿ ಮಾಡಿದರೆ ಮುಸ್ಲಿಮರು ಟೋಪಿ ಧರಿಸುವುದನ್ನು ನಿಲ್ಲಿಸುತ್ತಾರೆ ಮತ್ತು ಹಣೆಗೆ ತಿಲಕಗಳನ್ನು ಇಡಲು ಪ್ರಾರಂಭಿಸುತ್ತಾರೆ ಎಂದು ಹೇಳುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
ವೈರಲ್ ವೀಡಿಯೋದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಪಚೋದನಾಕಾರಿ ಹೇಳಿಕೆ ಶಾಸಕ ರಾಘವೇಂದ್ರ ಪ್ರತಾಪ್ ಸಿಂಗ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.