ಚೆನ್ನೈ: ಕಪೋಲಕಲ್ಪಿತ ಕಥೆಗಳನ್ನು ಸೇರಿಸಿ ತಯಾರಿಸಲಾದ ಹಿಂದಿ ಚಿತ್ರ ‘ಕೇರಳ ಸ್ಟೋರಿ’ ಕುರಿತು ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಈ ನಡುವೆ ಕೇರಳಿಗರ ಧಾರ್ಮಿಕ ಸಾಮರಸ್ಯವನ್ನು ಸಾಬೀತುಪಡಿಸುವ ವಿವಾಹದ ವೀಡಿಯೊವೊಂದನ್ನು ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಹಂಚಿಕೊಂಡಿದ್ದಾರೆ.
ಕೇರಳದ ಕಾಯಂಕುಳಂ ಚೆರಾವಳ್ಳಿ ಮಸೀದಿಯ ಆಡಳಿತ ಸಮಿತಿಯ ವತಿಯಿಂದ ಮಸೀದಿಯ ಆವರಣದಲ್ಲಿ ಹಿಂದೂ ಪದ್ಧತಿಯಂತೆ ನಡೆದ ವಿವಾಹದ ವಿಡಿಯೋವನ್ನು ರೆಹಮಾನ್ ಹಂಚಿಕೊಂಡಿದ್ದಾರೆ. ಅಭಿನಂದನೆಗಳು, ಮಾನವೀಯತೆಯು ಬೇಷರತ್ತಾದ ಮತ್ತು ಸಾಂತ್ವನದಾಯಕವಾಗಿರಬೇಕು ಎಂದು ರೆಹಮಾನ್ ವೀಡಿಯೊದೊಂದಿಗೆ ಟ್ವೀಟ್ ಮಾಡಿದ್ದಾರೆ.
ಹಿಂದೂ ಜೋಡಿಯ ವಿವಾಹ 2020ರ ಜನವರಿ 19ರಂದು ಕಾಯಂಕುಳಂನ ಚೆರಾವಳ್ಳಿ ಮಸೀದಿಯಲ್ಲಿ ನಡೆದಿತ್ತು. ಮಸೀದಿ ಬಳಿ ಬಾಡಿಗೆಗೆ ವಾಸವಿದ್ದ ದಿವಂಗತ ಅಶೋಕ ಮತ್ತು ಬಿಂದು ದಂಪತಿಯ ಪುತ್ರಿ ಅಂಜು ಅವರ ವಿವಾಹವನ್ನು ಮಸೀದಿಯ ಆಡಳಿತ ಸಮಿತಿ ಅಚ್ಚುಕಟ್ಟಾಗಿ ನಡೆಸಿಕೊಟ್ಟಿತ್ತು.
ಅಶೋಕ ಅವರು ಹೃದಯಾಘಾತದಿಂದ 2019 ರಲ್ಲಿ ನಿಧನರಾಗಿದ್ದರು. ತನ್ನ ಹಿರಿಯ ಮಗಳು ಅಂಜುಗೆ ಮದುವೆ ಮಾಡಲು ಬೇರೆ ದಾರಿ ಕಾಣದೆ ಬಿಂದು ಮಸೀದಿ ಕಮಿಟಿಯನ್ನು ಸಂಪರ್ಕಿಸಿದ್ದರು. ಮಸೀದಿ ಕಮಿಟಿಯವರು ಮಗಳ ಮದುವೆಯ ಸಂಪೂರ್ಣ ಖರ್ಚು ಭರಿಸುವುದಾಗಿ ಬಿಂದುವಿಗೆ ಮಾತು ಕೊಟ್ಟಿತ್ತು.
ಆಮಂತ್ರಣ ಪತ್ರಿಕೆಯಿಂದ ಹಿಡಿದು ಆಹಾರ, ಆಭರಣದವರೆಗೂ ಮಸೀದಿಯ ಆಡಳಿತ ಸಮಿತಿ ಏರ್ಪಾಡು ಮಾಡಿತ್ತು. ಮಸೀದಿ ಸಮಿತಿಯ ಲೆಟರ್ ಪ್ಯಾಡ್ ನಲ್ಲಿ ವಿಶೇಷ ವಿವಾಹ ಆಮಂತ್ರಣ ಪತ್ರಿಕೆ ಸಿದ್ಧಪಡಿಸಲಾಗಿತ್ತು.
ಹತ್ತು ಪವನ್ ಚಿನ್ನಾಭರಣ, ಬಟ್ಟೆ, ಊಟ ಸೇರಿದಂತೆ ಮದುವೆಯ ಸಂಪೂರ್ಣ ವೆಚ್ಚವನ್ನು ಮಸೀದಿ ಸಮಿತಿಯೇ ಭರಿಸಿತ್ತು. ಇದಲ್ಲದೇ ಸಮಿತಿಯು ವರ ಮತ್ತು ವಧುವಿನ ಹೆಸರಿನಲ್ಲಿ ಎರಡು ಲಕ್ಷ ರೂಪಾಯಿಗಳನ್ನು ಬ್ಯಾಂಕ್ಗೆ ಜಮಾ ಮಾಡಿತ್ತು.