ತಿರುವನಂತಪುರ: ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಕೇರಳದಲ್ಲಿ ಐದಾರು ದಿನಗಳಿಂದ ವಿಪರೀತವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಶನಿವಾರದಿಂದ ಇಲ್ಲಿಯವರೆಗೆ 24 ಜನರು ಮೃತಪಟ್ಟಿದ್ದಾರೆ. 11 ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಣೆಯಾಗಿದೆ. ಭೂ ಕುಸಿತದಿಂದ ಉಂಟಾದ ದುರ್ಘಟನೆಯಲ್ಲಿ ಹೆಚ್ಚಿನ ಸಾವು ಸಂಭವಿಸಿದ್ದು, ಇದುವರೆಗೆ 13 ಮೃತದೇಹಗಳು ಕೊಟ್ಟಾಯಂ ಜಿಲ್ಲೆಯಲ್ಲಿ ಪತ್ತೆಯಾಗಿವೆ. ಕೊಟ್ಟಾಯಂ ಮತ್ತು ಇಡುಕ್ಕಿಯಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದ್ದು, ಈ ಎರಡು ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ಕೊಟ್ಟಾಯಂನ ಮುಂಡಕಾಯಂ ಎಂಬಲ್ಲಿ ಮನೆಯೊಂದು ರಭಸವಾದ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ಭಯಾನಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜನರು ನೋಡು ನೋಡುತ್ತಿದಂತೆಯೇ ಅವರ ಕಣ್ಣೆದುರಲ್ಲೇ ಮನೆ ನದಿಗೆ ಉರುಳಿ ಬಿದ್ದು, ಕೊಚ್ಚಿಕೊಂಡು ಹೋಗುತ್ತದೆ. ಅದರ ಗೋಡೆಗಳು ಕುಸಿಯುವುದಿಲ್ಲ. ಬದಲಿಗೆ ಇಡೀ ಮನೆಯೇ ಬುಡಸಮೇತ ಬೀಳುವ ದೃಶ್ಯ ಹೆದರಿಕೆ ಹುಟ್ಟಿಸುವಂತಿದೆ.