ಮತ್ತೆ ತೀವ್ರಗೊಂಡ ಬಿಸಿಲ ಬೇಗೆ: ಸುಡುಬಿಸಿಲಿಗೆ ಜನ ಹೈರಾಣ

Prasthutha|


ಬೆಂಗಳೂರು; ರಾಜ್ಯದ ಕೆಲವೆಡೆ ಕಳೆದ ವಾರ ಸುರಿದ ಮಳೆಯಿಂದ ಸ್ಪಲ್ಪ ಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಾಗಲೇ ಮತ್ತೆ ಬಿಸಿಲಿನ ಝಳ ಆವರಿಸಿ ಕಳವಳಕ್ಕೀಡು ಮಾಡಿದೆ. ಬಿಸಿಲಿಗೆ ಕಾದ ನೆಲ ಧಗೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಸುಡುಬಿಸಿಲಿನಿಂದ ಜನ ಬಳಲಿ ಬೆಂಡಾಗಿದ್ದಾರೆ. ಏಪ್ರಿಲ್ ಕೊನೆಯ ವಾರದ ಪರಿಸ್ಥಿತಿ ಇದಾಗಿದ್ದು, ಮುಂದಿನ ತಿಂಗಳನ್ನು ನೆನಪಿಸಿಕೊಂಡರೆ ಆತಂಕ ಮೂಡುತ್ತದೆ. ಎ.ಸಿ. ಹಾಕಿಸಿಕೊಂಡಿರುವ ಕಚೇರಿಗಳು, ಮನೆಗಳಲ್ಲಿ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ನಿಯಂತ್ರಣದಲ್ಲಿದೆ. ಆದರೆ ಪ್ಯಾನ್ ಗಾಳಿ ಬಿಸಿಯಾಗಿ ಮೈ ಪೂರ್ತಿ ತೊಯ್ಯುವಂತೆ ಮಾಡಿದೆ. ನಿದ್ರೆಯಿಲ್ಲದ ರಾತ್ರಿ ಕಳೆಯುವ ಸ್ಥಿತಿ ನಿರ್ಮಾಣವಾಗಿದ್ದು, ಆಯಾಸ, ಬಳಲಿಕೆ. ಅಜೀರ್ಣ, ವಾಂತಿ, ಬೇಧಿಯಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಜತೆಗೆ ಮೈ ಮೇಲೆ ಬೆವರು ಗುಳ್ಳೆಗಳು ಕಾಣಿಸಿಕೊಳ್ಳುತ್ತಿದ್ದು, ಚರ್ಮದ ಸಮಸ್ಯೆಗಳು ಹೆಚ್ಚಾಗಿವೆ.

- Advertisement -


ಬಿಸಿಲಿನಿಂದ ಪಾರಾಗಲು ಲಿಂಬೆ ಷರಬತ್ತು ಸೇವಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಲಿಂಬೆ ಹಣ್ಣಿನ ದರ ಕೇಳಿ ಜನ ಮತ್ತಷ್ಟು ಬೆವರುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಳನೀರು ಸಹ ಕೈಗೆಟುಕದಂತಿದೆ. ಕಲ್ಲಂಗಡಿ ಕೆ.ಜಿ.ಗೆ 30 ರೂ ದಾಟಿದೆ. ಕರಬೂಜ ದರ ಸ್ವಲ್ಪ ಮಟ್ಟಿಗೆ ಕಡಿಮೆಯಿದ್ದರೂ ಸಹ ಹೆಚ್ಚಿನವರಿಗೆ ಇದು ರುಚಿಸುವುದಿಲ್ಲ. ನಗರ ಪ್ರದೇಶಗಳಲ್ಲಿ ಜನ ಐಸ್ ಕ್ರೀಂ ಅಂಗಡಿಗಳ ಮೊರೆ ಹೋಗುತ್ತಿದ್ದಾರೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಪರಿಸ್ಥಿತಿ ಇನ್ನೂ ಭಿನ್ನವಾಗಿದೆ. ಪದೇ ಪದೇ ಕೈ ಕೊಡುತ್ತಿರುವ ವಿದ್ಯುತ್ ನಿಂದ ಕುಡಿಯುವ ನೀರು ಸಂಗ್ರಹಿಸಿಕೊಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೊಳವೆ ಬಾವಿಗಳಲ್ಲೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆರೆ ಕುಂಟೆಗಳು ಒಣಗಿದ್ದು, ಇದರಿಂದ ಜಾನುವಾರುಗಳು, ಪಕ್ಷಿಗಳ ಸಂತತಿ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಮೇವಿನ ಸಮಸ್ಯೆ ಬೇರೆ ಎದುರಾಗಿದೆ.


ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಮಾತ್ರ ಭಾರೀ ಬಿಸಿಲು ಎನ್ನಲಾಗುತ್ತಿತ್ತು. ಆದರೆ ಈ ಬಾರಿ, ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ಧಗೆ ಎದುರಿಸಬೇಕಾದ ಅನಿವಾರ್ಯವಾಗಿದೆ. ಅಡ್ಡಮಳೆ, ಇನ್ನಿತರ ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿ ವಾಡಿಕೆಗಿಂತ ಬಿಸಿಲು ಹೆಚ್ಚಾಗಿದೆ ಎನ್ನುತ್ತಾರೆ ಹವಾಮಾನ ತಜ್ಞರು.



Join Whatsapp