ಕೊಡಗು: ಇಡೀ ರಾಜ್ಯದಲ್ಲಿಯೇ ಯಾವ ಜಿಲ್ಲೆಯಲ್ಲಿಯೂ ಇಷ್ಟು ಪಾಸಿಟಿವಿಟಿ ರೇಟ್ ಇಲ್ಲ. ಆದರೆ ಕೊಡಗು ಜಿಲ್ಲೆಯಲ್ಲಿ ಹೆಚ್ಚು ಪಾಸಿಟಿವಿಟಿ ರೇಟ್ ಹೊಂದಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಆತಂಕ ವ್ಯಕ್ತಪಡಿಸಿದ್ದಾರೆ.
ಮಡಿಕೇರಿಯಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಸಭೆ ನಡೆಸಿದ ಸಚಿವ ಸುಧಾಕರ್ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಕಡಿಮೆ ಮಾಡಲು ಇಡೀ ಜಿಲ್ಲಾಡಳಿತ ಇನ್ನಷ್ಟು ಮುಂಜಾಗ್ರತೆ ವಹಿಸಬೇಕು. ಇಲ್ಲದಿದ್ದರೆ ಇಡೀ ರಾಜ್ಯವೇ ಅನ್ ಲಾಕ್ ಆದರೂ ಕೊಡಗು ಲಾಕ್ ಡೌನ್ ಆಗಿರುತ್ತದೆ. ಆಗ ಜನಸಾಮಾನ್ಯರ ಪ್ರಶ್ನೆಗಳಿಗೆ ಹೇಗೆ ಉತ್ತರಿಸುತ್ತೀರಿ ಎಂದು ಸಚಿವ ಸುಧಾಕರ್ ಪ್ರಶ್ನಿಸಿದರು.
ಮೂರನೇ ಅಲೆಗೆ ಸಿದ್ಧತೆ ನಡೆಸಿರುವ ಕುರಿತು ವಿಚಾರಿಸಿದ ಸಚಿವ ಸುಧಾಕರ್ ಇದುವರೆಗೆ ಜಿಲ್ಲೆಯಲ್ಲಿ ನೇಮಕಾತಿ ಮಾಡಿಕೊಂಡ ವೈದ್ಯರೆಲ್ಲರೂ ರಿಪೋರ್ಟ್ ಮಾಡಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಈ ಪ್ರಶ್ನೆಗೆ ಸರಿಯಾದ ಉತ್ತರ ಕೊಡದ ಕೊಡಗು ಡಿಎಚ್‍ಓ ವಿರುದ್ಧ ಸಚಿವ ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದರು. ನೀವು ನಾಲ್ಕು ವರ್ಷಗಳಿಂದ ಇಲ್ಲಿದ್ದೀರಿ, ನಿಮ್ಮ ಇಲಾಖೆಯ ವಿಷಯಗಳೇ ಸರಿಯಾಗಿ ಗೊತ್ತಿಲ್ಲದಿದ್ದರೆ ಹೇಗೆ ಎಂದು ಸಿಡಿಮಿಡಿಗೊಂಡರು.
ಇನ್ನು ಕೊಡಗು ಜಿಲ್ಲೆಗೆ ಹೊರ ಜಿಲ್ಲೆಗಳಿಂದ ಅನಗತ್ಯವಾಗಿ ಬರುತ್ತಿವರರಿಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ನಿರ್ಬಂಧ ಹೇರಬೇಕು. ಇಲ್ಲದಿದ್ದರೆ ಜಿಲ್ಲೆಯಲ್ಲಿ ಇನ್ನಷ್ಟು ಹೆಚ್ಚು ಸೋಂಕು ಹರಡಲು ಕಾರಣವಾಗುತ್ತದೆ ಎಂದು ಸಚಿವ ಸುಧಾಕರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜುಲೈ ಐದರ ಒಳಗೆ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಐದಕ್ಕಿಂತ ಕಡಿಮೆ ಆಗದಿದ್ದರೆ ಜಿಲ್ಲೆಯಲ್ಲಿ ಅನ್ ಲಾಕ್ ಮಾಡುವುದು ಕಷ್ಟ. ಹೀಗಾಗಿ ಸೋಂಕಿನ ಪ್ರಮಾಣವನ್ನು ತಗ್ಗಿಸಲು ಕ್ರಮ ಕೈಗೊಳ್ಳಬೇಕು ಎಂದರು.
ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆ ಕಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಡೀ ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ವ್ಯಾಕ್ಸಿನ್ ವಿತರಣೆ ಮಾಡಿರುವುದು ನಮ್ಮ ರಾಜ್ಯದಲ್ಲಿಯೇ. ಈಗಾಗಲೇ ನಮ್ಮಲ್ಲಿ 2 ಕೋಟಿ 24 ಲಕ್ಷಕ್ಕೂ ಹೆಚ್ಚು ವ್ಯಾಕ್ಸಿನ್ ವಿತರಣೆ ಮಾಡಲಾಗಿದೆ. ಜುಲೈ ತಿಂಗಳಲ್ಲಿ ವ್ಯಾಕ್ಸಿನ್ ಪೂರೈಕೆ ಜಾಸ್ತಿಯಾಗಲಿದ್ದು, ಇನ್ನಷ್ಟು ಹೆಚ್ಚು ವಿತರಣೆ ಮಾಡಲಾಗುವುದು ಎಂದು ಹೇಳಿದರು.
ಈ ನಡುವೆ ರಾಜಕೀಯ ಪ್ರಶ್ನೆಗಳಿಗೂ ಪ್ರತಿಕ್ರಿಯೆ ನೀಡಿದ ಸುಧಾಕರ್, ಶಾಸಕ ರಮೇಶ್ ಜಾರಕಿಹೊಳಿ ಅವರು ದೆಹಲಿಗೆ ಹೋಗೋದು ಏನು ಅಪರಾಧವೇ ಎಂದು ಪ್ರಶ್ನಿಸಿದರು. ಅಲ್ಲದೆ, ಅವರು ನಮ್ಮ ಕೇಂದ್ರದ ನಾಯಕರನ್ನು ಭೇಟಿಯಾಗುವುದು ತಪ್ಪೇನಲ್ಲ ಎಂದು ರಮೇಶ್ ಜಾರಕಿಹೊಳಿ ಅವರು ದೆಹಲಿಗೆ ಹೋಗಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಅವರು ದೆಹಲಿಗೆ ವೈಯಕ್ತಿಕ ವಹಿವಾಟುಗಳಿಗಾಗಿ ಹೋಗಿರಬಹುದು. ಇಲ್ಲ ರಾಜಕೀಯ ಕಾರಣಕ್ಕೂ ಹೋಗಿರಬಹುದು. ಆದರೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಅಷ್ಟಕ್ಕೂ ಅವರು ದೆಹಲಿಗೆ ಯಾಕೆ ಹೋಗಿದ್ದಾರೆ ಎಂದು ನನಗೆ ಹೇಳಿ ಹೋಗಿಲ್ಲ, ಅದು ನನಗೆ ಗೊತ್ತೂ ಇಲ್ಲ. ಅದನ್ನು ನಾನು ಹೇಳಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಇನ್ನು ಕೇರಳ ಕರ್ನಾಟಕ ಗಡಿಭಾಗದಲ್ಲಿ ಕನ್ನಡದ ನಾಮಫಲಕಗಳನ್ನು ಬದಲಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗಡಿಯಲ್ಲಿ ಯಾವುದೇ ಕಾರಣಕ್ಕೂ ಕನ್ನಡ ನಾಮಫಲಕ ಬದಲಾಯಿಸಲು ಬಿಡುವುದಿಲ್ಲ ಎಂದರು.