ಮಂಗಳೂರು ವೈದ್ಯರಿಂದ ಚಿಕಿತ್ಸೆ ನಿರಾಕರಿಸಿದ ಘಟನೆ : ಸಂತ್ರಸ್ತೆ ಜಾಸ್ಮೀನ್, SDPI ಜಿಲ್ಲಾಧ್ಯಕ್ಷರಿಗೆ ಆರೋಗ್ಯ ಇಲಾಖೆಯಿಂದ ವಿಚಾರಣಾ ನೋಟಿಸ್

Prasthutha|

►ಡಾ. ಪ್ರಿಯಾ ಬಲ್ಲಾಳ್ ಹಾಗೂ ಇತರೆ ಆಸ್ಪತ್ರೆಗಳ ಮುಖ್ಯಸ್ಥರಿಗೆ ಹಾಜರಾಗಲು ಸೂಚನೆ

- Advertisement -

ಇತ್ತಿಚೆಗೆ ಮಂಗಳೂರು ಮೂಲದ ಎಂಟು ತಿಂಗಳ ಗರ್ಭಿಣಿ ಜಾಸ್ಮೀನ್ ಎಂಬ ಮಹಿಳೆಗೆ ನಗರದ ವೈದ್ಯೆ ಪ್ರಿಯಾ ಬಲ್ಲಾಳ್ ಸೇರಿದಂತೆ ಕೆಲ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿದ ಘಟನೆಯ ಕುರಿತು ಆರೋಪ ಕೇಳಿ ಬಂದಿತ್ತು. ಈ ಕುರಿತಂತೆ ನೀಡಿರುವ ದೂರಿನ ವಿಚಾರಣೆಗಾಗಿ ಜಿಲ್ಲಾ ಆರೋಗ್ಯ ಇಲಾಖೆಯು ಸಂತ್ರಸ್ತೆ ಜಾಸ್ಮೀನ್ ಅವರಿಗೆ ವಿಚಾರಣೆ ಹಾಜರಾಗುವಂತೆ ನೋಟೀಸು ನೀಡಿದೆ. ಜೊತೆಗೆ ಜಾಸ್ಮೀನ್ ಪರ ನ್ಯಾಯಕ್ಕಾಗಿ ಎಸ್ಡಿಪಿಐ ಪಕ್ಷವು ಮುಂಚೂಣಿಯ ಹೋರಾಟ ಕೈಗೊಂಡಿತ್ತು. ಪಕ್ಷದ ಜಿಲ್ಲಾಧ್ಯಕ್ಷ ಅಥಾವುಲ್ಲಾ ಅವರಿಗೂ ಕೂಡಾ ವಿಚಾರಣೆಗೆ ಹಾಜರಾಗುವಂತೆ ನೋಟಿಸು ನೀಡಿದೆ. ವಿಚಾರಣೆಯನ್ನು ಜೂನ್ 23ರಂದು ನಗರದ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆಯಲಿದೆ ಎಂದು ನೋಟಿಸಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಗೆ ಸಂಬಂಧಪಟ್ಟ ವೈದ್ಯರನ್ನು ಹಾಗೂ ಆಸ್ಪತ್ರೆಗಳ ಮುಖ್ಯಸ್ಥರುಗಳನ್ನು ಕೂಡಾ ವಿಚಾರಣೆಗೆ ಹಾಜರಾಗುವಂತೆ ನೋಟಿಸು ನೀಡಲಾಗಿದೆ.

ಕೊಲ್ಲಿ ರಾಷ್ಟ್ರದಲ್ಲಿ ಪತಿಯೊಂದಿಗೆ ಇದ್ದ ಜಾಸ್ಮೀನ್ ಹೆರಿಗೆಗೆಂದು ತವರಿಗೆ ಬಂದಿದ್ದರು. ಹೆರಿಗೆ ನೋವು ಬಂದಾಗ ತನ್ನ ಖಾಯಂ ವೈದ್ಯರಾಗಿದ್ದ ಪ್ರಿಯಾ ಅವರನ್ನು ಸಂಪರ್ಕಿಸಿದಾಗ ಅವರು ಬೇರೆ ಆಸ್ಪತ್ರೆಗಳಿಗೆ ಹೋಗುವಂತೆ ಹೇಳಿದ್ದರು ಮಾತ್ರವಲ್ಲ ಇತರೆ ಆಸ್ಪತ್ರೆಗಳಲ್ಲೂ ಚಿಕಿತ್ಸೆ ನೀಡದಂತೆ ತಡೆದಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದರು. ಆ ಬಳಿಕ ಸಂತ್ರಸ್ತೆ 24 ಗಂಟೆಗಳ ಅವಧಿಯಲ್ಲಿ 5-6 ಆಸ್ಪತ್ರೆಗಳಿಗೆ ಅಲೆದಾಡಿದ್ದರು. ಈ ಘಟನೆಯ ನಂತರ ವೈದ್ಯರ ಹಾಗೂ ಆಸ್ಪತ್ರೆಗಳ ವಿರುದ್ಧ ಸಾರ್ವಜನಿಕರ ಅಕ್ರೋಶ ಭುಗಿಲೆದ್ದಿತ್ತು.

- Advertisement -

ಸಂತ್ರಸ್ತೆ ನೀಡಿದ ಪೊಲೀಸ್ ದೂರಿನ ವಿರುದ್ಧ FIR ದಾಖಲಿಸದೆ, ಸಂತ್ರಸ್ತೆಯ ಸಂಬಂಧಿಕರ ವಿರುದ್ಧವೇ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆಂದು FIR ದಾಖಲಿಸಿ ಕೆಲವರನ್ನು ಬಂಧಿಸಿದ್ದರು. ಘಟನೆಯ ನಂತರ ಸಂತ್ರಸ್ತೆ ನೀಡಿದ ದೂರಿನ ಆಧಾರದಲ್ಲಿ ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆಯ ಅಡಿಯಲ್ಲಿ ಒಂದು ತನಿಖಾ ತಂಡವನ್ನು ರಚಿಸಿದ್ದರು. ಆದರೆ ತಾನು ನೀಡಿದ ಪೊಲೀಸ್ ದೂರನ್ನು FIR ಮಾಡದಿರುವ ಬಗ್ಗೆ ಉಲ್ಲೇಖಿಸಿ ಹಾಗೂ ಪ್ರಭಾವಿ ವೈದ್ಯರ ವಿರುದ್ಧ ಆರೋಗ್ಯ ಇಲಾಖೆಯೇ ತನಿಖೆ ಮಾಡುವ ಬಗ್ಗೆ ಸಂತ್ರಸ್ತೆ ಜಾಸ್ಮೀನ್, ತನಗೆ ನ್ಯಾಯ ಸಿಗುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಇದೀಗ ಆ ತನಿಖಾ ತಂಡ ವಿಚಾರಣೆಗೆ ನೋಟಿಸು ನೀಡಿದ್ದು, ನಾಳೆ ವಿಚಾರಣೆ ನಿಗದಿಪಡಿಸಲಾಗಿದೆ.

Join Whatsapp